ಹಾವೇರಿ: ಜಿಲ್ಲೆಐ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಗ್ರಾಮದ ಬಳಿಯ ಸ್ಟೋನ್ ಕ್ರಷರ್ ಗೆ ನುಗ್ಗಿ ಐದು ಲಕ್ಷ ರುಪಾಯಿ ಮೌಲ್ಯದ ವಸ್ತುಗಳನ್ನ ದೋಚಿ ಪರಾರಿ ಆಗಿದ್ದವರ ಪೈಕಿ ಓರ್ವ ದರೋಡೆಕೋರನನ್ನ ಬಂಧಿಸಲಾಗಿದೆ. ಬಂಧಿತನನ್ನ ತುಮಕೂರು ಮೂಲದ ಅಲ್ಲಾಭಕ್ಷಾ ಅತ್ತಾವುಲ್ಲಾ ಎಂದು ಗುರುತಿಸಲಾಗಿದೆ.
ಸೆಪ್ಟೆಂಬರ್ 10 ರಂದು ಗ್ರಾಮದ ರುದ್ರೇಶ ಚೂರಿ ಎಂಬುವರ ಕ್ರಷರ್ ಗೆ ನುಗ್ಗಿದ್ದ ನಾಲ್ವರು ದರೋಡೆಕೋರರು, ಅಲ್ಲಿದ್ದ ಸೆಕ್ಯೂರಿಟಿ ಗಾರ್ಡ್ ಗೆ ಚಾಕು ತೋರಿಸಿ ಅಲ್ಲಿನ ವಸ್ತುಗಳನ್ನ ದೋಚಿ ಪರಾರಿ ಆಗಿದ್ದರು. ನಾಲ್ವರು ಆರೋಪಿಗಳ ಪೈಕಿ ಓರ್ವನನ್ನ ಪೊಲೀಸರು ಬಂಧಿಸಿದ್ದಾರೆ.
ಬಂಧಿತನಿಂದ ಪೊಲೀಸರು ಐದು ಲಕ್ಷ ರುಪಾಯಿ ಮೌಲ್ಯದ ಕ್ರಷರ್ ನಲ್ಲಿ ಬಳಸುತ್ತಿದ್ದ ಸಾಮಗ್ರಿಗಳನ್ನ ಜಪ್ತಿ ಮಾಡಿದ್ದಾರೆ. ಬ್ಯಾಡಗಿ ಪಿಎಸ್‍ಐ ಮಹಾಂತೇಶ ನೇತೃತ್ವದಲ್ಲಿ ಆರೋಪಿಯನ್ನ ಬಂಧಿಸಲಾಗಿದೆ. ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.