ರಾಯಚೂರು: ಜಿಲ್ಲೆಯ ಮಸ್ಕಿ ತಾಲೂಕಿನಲ್ಲಿ ಎನ್.ಆರ್.ಬಿ.ಸಿ 5ಎ ಕಾಲುವೆಗಾಗಿ ಹೋರಾಟ ನಡೆಸಿರುವ ರೈತರು ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಈಗಾಗಲೇ ಮಸ್ಕಿ ಉಪ ಚುನಾವಣೆ ಬಹಿಷ್ಕರಿಸಿರುವ ಜನ, ಈಗ ಗ್ರಾಮ ಪಂಚಾಯತಿ ಚುನಾವಣೆಯನ್ನೂ ಬಹಿಷ್ಕರಿಸಿದ್ದಾರೆ. ಸರ್ಕಾರ ರೈತ ಪರ ನಿರ್ಧಾರ ಕೈಗೊಳ್ಳುವವರೆಗೂ ಹೋರಾಟ ಮುಂದುವರೆಸುವ ಎಚ್ಚರಿಕೆ ನೀಡಿದ್ದಾರೆ.
ನಮ್ಮ ಜಮೀನುಗಳಿಗೆ ನೀರು ಕೊಡಿ, ಅಲ್ಲಿಯವರೆಗೂ ನಾವು ಯಾವುದೇ ಚುನಾವಣೆಯಲ್ಲೂ ಮತ ಹಾಕುವುದಿಲ್ಲ. ಚುನಾವಣೆ ಪ್ರಕ್ರಿಯೆಯನ್ನೇ ನಿಲ್ಲಿಸಿ ಅಂತ ರಾಯಚೂರಿನ ಮಸ್ಕಿ ತಾಲೂಕಿನ ರೈತರು ಆಗ್ರಹಿಸಿದ್ದಾರೆ. ಡಿಸೆಂಬರ್ 27ರಂದು ನಡೆಯಲಿರುವ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಭಾಗಿಯಾಗುವುದಿಲ್ಲ ಅಂತ ಮಸ್ಕಿ ತಾಲೂಕಿನ ಪಾಮನಕಲ್ಲೂರು, ಅಂಕುಶದೊಡ್ಡಿ, ವಟಗಲ್ ಹಾಗು ಅಮಿನಗಡ್ ಗ್ರಾಮಸ್ಥರು ದೇವರ ಮುಂದೆ ಪ್ರತಿಜ್ಞೆ ಮಾಡಿದ್ದಾರೆ. ಯಾರೂ ನಾಮಪತ್ರ ಸಲ್ಲಿಸುವುದಿಲ್ಲ, ಮತದಾನವೂ ಮಾಡುವುದಿಲ್ಲ ಅಂತ ಪ್ರಮಾಣ ಮಾಡಿದ್ದಾರೆ.
Advertisement
Advertisement
ಅಮಿನಗಡ್‍ದಲ್ಲಿ 15, ವಟಗಲ್‍ನಲ್ಲಿ 15 ಪಾಮನಕಲ್ಲೂರುನಲ್ಲಿ 21 ಹಾಗೂ ಅಂಕುಶದೊಡ್ಡಿಯಲ್ಲಿ 18 ಸದಸ್ಯರ ಆಯ್ಕೆಗೆ ನಡೆಯಲಿರುವ ಗ್ರಾಮ ಪಂಚಾಯತಿ ಚುನಾವಣೆ ಈ ಬಾರಿ ನಡೆಯುವುದು ಅನುಮಾನವಿದೆ. ಈ ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಯನ್ನು ಸಂಪೂರ್ಣವಾಗಿ ಬಹಿಷ್ಕರಿಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಹಂತ ಹಂತವಾಗಿ ಇನ್ನಷ್ಟು ಗ್ರಾಮಗಳು ಮತದಾನ ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿವೆ.
Advertisement
Advertisement
ಕೃಷ್ಣ ತುಂಗಭದ್ರಾ ನದಿ ನೀರಿನಿಂದ ವಂಚಿತರಾಗಿರುವ ಎರಡು ನದಿಗಳ ಮಧ್ಯದ 40 ಹಳ್ಳಿ ಜನ 5 ಎ ಕಾಲುವೆಗಾಗಿ ನಿರಂತರವಾಗಿ ಹೋರಾಟ ನಡೆಸಿದ್ದಾರೆ. ಸುಮಾರು 1.72 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವ 5 ಎ ಕಾಲುವೆ ನಿರ್ಮಾಣಕ್ಕೆ 12 ವರ್ಷಗಳಿಂದ ಹೋರಾಟ ನಡೆಸಿದ್ದರು ಯಾವುದೇ ಸ್ಪಂದನೆ ಸಿಕ್ಕಲ್ಲ. ವಿರೋಧ ಪಕ್ಷಗಳು ರೈತರ ಪರ ಧ್ವನಿ ಎತ್ತಿಲ್ಲ ಅಂತ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ 17 ದಿನಗಳಿಂದ ನಿರಂತರವಾಗಿ ಹೋರಾಟ ನಡೆಸಿದ್ದರು ಕೂಡ ಸರ್ಕಾರ ಸೂಕ್ತ ನಿರ್ಧಾರಕ್ಕೆ ಬಂದಿಲ್ಲ. ಹೀಗಾಗಿ ಪಂಚಾಯತಿ ಚುನಾವಣೆ ಬಹಿಷ್ಕರಿಸುತ್ತಿರುವುದಾಗಿ ಗ್ರಾಮಸ್ಥರು ಹೇಳಿದ್ದಾರೆ.
ಮಸ್ಕಿಯ ಪಾಮನಕಲ್ಲೂರಿನಲ್ಲಿ ನಡೆಯುತ್ತಿರುವ ಧರಣಿಗೆ ವಿವಿಧ ಗ್ರಾಮಗಳ ರೈತರು ಪಾದಯಾತ್ರೆ ಮೂಲಕ ಆಗಮಿಸಿ ಹೋರಾಟಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ. ಸದ್ಯ ನಾಲ್ಕು ಗ್ರಾಮಗಳು ಮತದಾನ ಬಹಿಷ್ಕಾರದ ಎಚ್ಚರಿಕೆ ನೀಡಿದ್ದು ಮುಂದೆ 40 ಗ್ರಾಮಗಳ ಜನ ಒಟ್ಟಾಗಿ ಹೋರಾಟಕ್ಕೆ ಸಿದ್ದತೆ ನಡೆಸಿದ್ದಾರೆ. ಬೆಂಗಳೂರು ಚಲೋ ನಡೆಸಿ ರಾಜಧಾನಿ ಮುತ್ತಿಗೆಯಂತ ಹೋರಾಟಗಳನ್ನ ಹಮ್ಮಿಕೊಳ್ಳುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.