ಮೈಸೂರು: ನೆರೆ ರಾಜ್ಯ ಕೇರಳದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಮೈಸೂರು ನಲುಗಿ ಹೋಗಿದೆ. ಮೈಸೂರು ಜಿಲ್ಲೆಯ ನಾಲ್ಕೈದು ತಾಲೂಕುಗಳಲ್ಲಿ ಪ್ರವಾಹ ಉಂಟಾಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಈ ಮಧ್ಯೆ ದೇವರಿಗೂ ಸಹ ಜಲದಿಗ್ಭಂದನ ಉಂಟಾಗಿದ್ದು, ಸಂತ್ರಸ್ತರ ನೆರವಿಗೆ ಮೈಸೂರು ಜಿಲ್ಲಾಡಳಿತ ಗಂಜಿ ಕೇಂದ್ರ ತೆರೆಯಲು ಮುಂದಾಗಿದೆ.
ಕೆಲ ದಿನಗಳಿಂದ ಕೇರಳದಲ್ಲಿ ಎಡಬಿಡದೆ ಸುರಿಯುತ್ತಿರುವ ಮಹಾಮಳೆಗೆ ಮೈಸೂರು ಜಿಲ್ಲೆಯ ಹಲವು ಗ್ರಾಮಗಳು ಅಕ್ಷರಶಃ ನಲುಗಿ ಹೋಗಿವೆ. ಕಬಿನಿಯಿಂದ 80 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಟ್ಟ ಕಾರಣ ನಂಜನಗೂಡು, ಹೆಚ್.ಡಿ ಕೋಟೆ ಭಾಗದಲ್ಲಿ ಪ್ರವಾಹ ಉಂಟಾಗಿದೆ.
Advertisement
ಹಲವು ಗ್ರಾಮಗಳು ಮುಳುಗಡೆಯಾಗಿದ್ದು, ಹೆಚ್.ಡಿ ಕೋಟೆಯ ಗಡಿಭಾಗದ ಗ್ರಾಮಗಳಾದ ಮಚ್ಚೂರು, ಡಿ.ಬಿ ಕುಪ್ಪೆ, ವಡಕನಮಾಳ, ಆನೆಮಾಳ ಸೇರಿ ಅಕ್ಕಪಕ್ಕದ ಗ್ರಾಮಗಳ 35ಕ್ಕೂ ಹೆಚ್ಚು ಜನರನ್ನ ತೆಪ್ಪದ ಮೂಲಕ ಸುರಕ್ಷಿತವಾದ ಸ್ಥಳಕ್ಕೆ ಬಿಡಲಾಗಿದೆ. ಇವರಿಗಾಗಿ ತಾಲೂಕು ಆಡಳಿತದಿಂದ ಗಂಜಿ ಕೇಂದ್ರವನ್ನು ತೆರೆಯಲಾಗಿದೆ.
Advertisement
Advertisement
ದಕ್ಷಿಣ ಕಾಶೀ ಎಂದೇ ಕರೆಸಿಕೊಳ್ಳುವ ನಂಜನಗೂಡಿನ ನಂಜುಂಡೇಶ್ವರ ದೇವಾಲಯದ ಆವರಣಕ್ಕೆ ನೀರು ನುಗ್ಗಿದ್ದು, ದೇವಾಲಯದ ಆವರಣದಲ್ಲಿರುವ ಮಳಿಗೆಗಳು ಹಾಗೂ ನಂಜುಂಡೇಶ್ವರ ದೇವಾಲಯದ ಅಕ್ಕಪಕ್ಕದ ಅಯ್ಯಪ್ಪ ಸ್ವಾಮಿ, ಪರಶುರಾಮ, ಹದಿನಾರು ಕಲುಮಂಟಪ್ಪ, ಮನೆಗಳಿಗೆ ನೀರು ನುಗ್ಗಿದೆ.
Advertisement
ಮತ್ತೊಂದು ಕಡೆ ನಂಜನಗೂಡು ಮೂಲಕ ಊಟಿಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಮೇಲೆ ನೀರು ಉಕ್ಕಿ ಹರಿಯುತ್ತಿರುವುದರಿಂದ ಹೆದ್ದಾರಿ ಸಂಪರ್ಕ ಕಡಿತಗೊಂಡಿದೆ. ಈ ಮಧ್ಯೆ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ನಂಜನಗೂಡಿಗೆ ಭೇಟಿ ಕೊಟ್ಟು ಸ್ಥಳೀಯ ನಿವಾಸಿಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ಕೊಟ್ಟಿದ್ದಾರೆ.
ಅಲ್ಲದೇ ಕೆ.ಆರ್ ನಗರದ ಕಪ್ಪಡಿಯ ಸಿದ್ದಪಾಜಿ-ರಾಚಪಾಜಿ ದೇಗುಲಕ್ಕೆ ಕಾವೇರಿ ನದಿ ನೀರು ನುಗ್ಗಿದ್ದು ಭಕ್ತರು ದೇಗುಲಕ್ಕೆ ಆಗಮಿಸಲು ಪರದಾಡುತ್ತಿದ್ದಾರೆ. ಈ ಮಧ್ಯೆ ಮೈಸೂರು ಜಿಲ್ಲಾಡಳಿತ ಮಹಾನಗರ ಪಾಲಿಕೆಯ ಜೊತೆಗೂಡಿ ಕೊಡಗಿನ ನೆರೆ ಸಂತ್ರಸ್ತರಿಗೆ ನೆರವಾಗಲು ಮುಂದಾಗಿದೆ.
ಮೈಸೂರಿನ ಟೌನ್‍ಹಾಲ್‍ನಲ್ಲಿ 24*7 ಗಂಜಿ ನೆರವು ಕೇಂದ್ರ ಆರಂಭಿಸಿದೆ. ಈ ಕೇಂದ್ರದ ಮೂಲಕ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಕೊಡಗಿನ ನೆರೆ ಸಂತ್ರಸ್ಥರಿಗೆ ಆಹಾರ ಪದಾರ್ಥ ಸೇರಿ ಬಟ್ಟೆಗಳನ್ನ ನೀಡಬಹುದಾಗಿದೆ. ಇಲ್ಲಿ ಸಂಗ್ರಹವಾದ ಆಹಾರ ಮತ್ತು ಇತರೆ ಪದಾರ್ಥಗಳನ್ನು ಪಾಲಿಕೆ ವಾಹನದ ಮೂಲಕವೇ ಕೊಡಗಿಗೆ ರವಾನೆ ಮಾಡುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಒಟ್ಟಾರೆ ನೆರೆ ರಾಜ್ಯದ ವರುಣನ ಎಫೆಕ್ಟ್ ಮೈಸೂರು ಜಿಲ್ಲೆಯಲ್ಲಿ ಭಾರೀ ಅನಾಹುತವನ್ನುಂಟು ಮಾಡಿದೆ. ಆದರೆ ಮಳೆರಾಯ ಯಾವಾಗ ಬಿಡುವು ಕೊಡ್ತಾನೆ? ನಮ್ಮ ಈ ಸಮಸ್ಯೆ ಯಾವಾಗ ನಿವಾರಣೆಯಾಗತ್ತೆ ಅಂತಾ ಜನ ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv