ಯಶಸ್ವಿ ಕೈ ತಪ್ಪಿದ ಚೊಚ್ಚಲ T20I ಶತಕ – 10 ವಿಕೆಟ್‌ ಜಯದೊಂದಿಗೆ ಸರಣಿ ಗೆದ್ದ ಭಾರತ!

Public TV
2 Min Read
Team India 9

ಹರಾರೆ: ಯಶಸ್ವಿ ಜೈಸ್ವಾಲ್‌ (Yashasvi Jaiswal), ನಾಯಕ ಶುಭಮನ್‌ ಗಿಲ್‌ (Shubman Gill) ಅವರ ಶತಕದ ಜೊತೆಯಾಟದಿಂದ ಜಿಂಬಾಬ್ವೆ ವಿರುದ್ಧ ಭಾರತ 10 ವಿಕೆಟ್‌ಗಳ ಜಯ ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ 3-1 ಅಂತರದಲ್ಲಿ ಮುನ್ನಡೆ ಸಾಧಿಸಿದ್ದು, ಸರಣಿ ಗೆದ್ದುಕೊಂಡಿದೆ.

ಇಲ್ಲಿನ ಹರಾರೆ ಸ್ಫೋರ್ಟ್ಸ್‌ಕ್ಲಬ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಫೀಲ್ಡಿಂಗ್‌ ಆಯ್ದುಕೊಂಡ ಭಾರತ ಬ್ಯಾಟಿಂಗ್‌ ಮಾಡುವ ಅವಕಾಶವನ್ನು ಜಿಂಬಾಬ್ವೆಗೆ ಬಿಟ್ಟುಕೊಟ್ಟಿತು. ಮೊದಲು ಬ್ಯಾಟಿಂಗ್‌ ಮಾಡಿದ ಜಿಂಬಾಬ್ವೆ (Zimbabwe) 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 152 ರನ್‌ ಗಳಿಸಿತ್ತು. 153 ರನ್‌ ಗುರಿ ಪಡೆದ ಭಾರತ 15.2 ಓವರ್‌ಗಳಲ್ಲೇ 156 ರನ್‌ ಚಚ್ಚಿ ಗೆಲುವು ಸಾಧಿಸಿತು.

Team India 4 1

153 ಗುರಿ ಪಡೆದ ಭಾರತದ ಪರ ಆರಂಭಿಕನಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್‌ ಎದುರಾಳಿ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ದಂಡಿಸಿದರು. ಇದರೊಂದಿಗೆ ನಾಯಕ ಶುಭಮನ್‌ ಗಿಲ್‌ ಸಹ ಬ್ಯಾಟಿಂಗ್‌ ಸಾಥ್‌ ನೀಡಿದರು. ಮುರಿಯದ ಮೊದಲ ವಿಕೆಟ್‌ಗೆ ಈ ಜೋಡಿ 15.2 ಓವರ್‌ಗಳಲ್ಲಿ 156 ರನ್‌ ಜೊತೆಯಾಟ ನೀಡುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟಿತು.

Team India 2 3

ಕೈತಪ್ಪಿದ ಯಶಸ್ವಿ ಚೊಚ್ಚಲ ಅಂತಾರಾಷ್ಟ್ರೀಯ ಶತಕ:
ಆರಂಭದಿಂದಲೇ ಸ್ಫೋಟಕ ಪ್ರದರ್ಶನಕ್ಕೆ ಮುಂದಾಗಿದ್ದ ಯಶಸ್ವಿ ಜೈಸ್ವಾಲ್‌ 29 ಎಸೆತಗಳಲ್ಲೇ ಸ್ಫೋಟಕ ಫಿಫ್ಟಿ ಬಾರಿಸಿದ್ದರು. ಬಳಿಕವೂ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್‌ ಮುಂದುವರಿಸಿ 53 ಎಸೆತಗಳಲ್ಲಿ 93 ರನ್‌ (2 ಸಿಕ್ಸರ್‌, 13 ಬೌಂಡರಿ) ಗಳಿಸಿ ಅಜೇಯರಾಗುಳಿದರು. ಈ ವೇಳೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಸಿಡಿಸುವ ಸನಿಹದಲ್ಲಿದ್ದ ಯಶಸ್ವಿ ಜೈಸ್ವಾಲ್‌ ಶತಕ ವಂಚಿತರಾದರು. ಮತ್ತೊಂದೆಡೆ ತಾಳ್ಮೆಯ ಬ್ಯಾಟಿಂಗ್‌ನೊಂದಿಗೆ ಸಾಥ್‌ ನೀಡಿದ ನಾಯಕ ಶುಭಮನ್‌ ಗಿಲ್‌ 39 ಎಸೆತಗಳಲ್ಲಿ 58 ರನ್‌ (6 ಬೌಂಡರಿ), 2 ಸಿಕ್ಸರ್)‌ ಗಳಿಸಿ ಮಿಂಚಿದರು.

Team India 3 2

ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ್ದ ಜಿಂಬಾಬ್ವೆ ಪರ ನಾಯಕ ಸಿಖಂದರ್‌ ರಝಾ 28 ಎಸೆತಗಳ್ಲಲಿ ಸ್ಫೋಟಕ 46 ರನ್‌ (3 ಸಿಕ್ಸರ್, 2 ಬೌಂಡರಿ)‌ ಬಾರಿಸಿದರೆ, ಆರಂಭಿಕರಾದ ವೆಸ್ಲಿ ಮಾಧೆವೆರೆ 25 ರನ್‌, ತಡಿವಾನಾಶೆ ಮರುಮಣಿ 32 ರನ್‌ಗಳ ಕೊಡುಗೆ ನೀಡಿದರು. ಇದರೊಂದಿಗೆ ಜಿಂಬಾಬ್ವೆ 152 ರನ್‌ ಕಲೆಹಾಕಿತ್ತು.

ಟೀಂ ಇಂಡಿಯಾ ಪರ ಖಲೀಲ್‌ ಅಹ್ಮದ್‌ 2 ವಿಕೆಟ್‌ ಕಿತ್ತರೆ, ತುಷಾರ್‌ ದೇಶ್‌ಪಾಂಡೆ, ವಾಷಿಂಗ್ಟನ್‌ ಸುಂದರ್‌, ಅಭಿಷೇಕ್‌ ಶರ್ಮಾ, ಶಿವಂ ದುಬೆ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

Share This Article