ಬೆಂಗಳೂರು: ರಾಜ್ಯ ಸರ್ಕಾರದ ಕ್ಯಾಬಿನೆಟ್ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಸರ್ಕಾರಿ ಉದ್ಯೋಗಿಗಳಿಗೆ ತತ್ ಕ್ಷಣದಿಂದಲೇ 4ನೇ ಶನಿವಾರವೂ ಸರ್ಕಾರಿ ರಜೆ ಸಿಗಲಿದೆ.
ಈ ಕುರಿತು ಹೊರಡಿಸಲಾದ ರಾಜ್ಯಪತ್ರದ ಪ್ರತಿಯಲ್ಲಿ, ಮುಂದಿನ ಆದೇಶದವರೆಗೂ ಪ್ರತಿ ತಿಂಗಳ 4ನೇ ಶನಿವಾರ ಸಾರ್ವತ್ರಿಕ ರಜೆ ಹಾಗೂ ರಾಜ್ಯ ಸರ್ಕಾರಿ ನೌಕರರಿಗೆ ಇದ್ದ ಹರಿನೈದು ದಿನಗಳ ಸಾಂದರ್ಭಿಕ ರಜೆಯನ್ನು 10 ದಿನಗಳಿಗೆ ಇಳಿಸುವುದಾಗಿ ಉಲ್ಲೇಖಿಸಲಾಗಿದೆ.
ಜೂನ್ 6 ರಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ರಜೆ ನೀಡುವ ನಿರ್ಧಾರ ಕೈಗೊಳ್ಳಲಾಗಿತ್ತು. ದೇಶದ 17 ರಿಂದ 18 ರಾಜ್ಯಗಳಲ್ಲಿ ಶನಿವಾರ ರಜೆ ನೀಡಲಾಗುತ್ತಿದೆ. ಇನ್ನು ಕೆಲವು ರಾಜ್ಯಗಳಲ್ಲಿ ಎರಡು ಶನಿವಾರ ರಜೆ ನೀಡಲಾಗುತ್ತಿದೆ. ನಮ್ಮ ರಾಜ್ಯದಲ್ಲಿ 4ನೇ ಶನಿವಾರ ರಜೆ ನೀಡಲು ಒಪ್ಪಿಗೆ ಸೂಚಿಸಲಾಗಿದೆ ಎಂದು ಸಚಿವ ಕೃಷ್ಣ ಭೈರೇಗೌಡ ಅವರು ತಿಳಿಸಿದ್ದರು.
ಜಯಂತಿಗಳ ರಜೆ ಕಡಿತಗೊಳಿಸಿ ನಾಲ್ಕನೇ ಶನಿವಾರ ರಜೆ ನೀಡಲು 6ನೇ ವೇತನ ಆಯೋಗದ ಶಿಫಾರಸಿನಲ್ಲಿ ತಿಳಿಸಲಾಗಿತ್ತು. ಈ ಕುರಿತು ಕೃಷ್ಣ ಭೈರೇಗೌಡ ನೇತೃತ್ವದ ಸಂಪುಟ ಉಪ ಸಮಿತಿ ವರದಿ ನೀಡಿತ್ತು. ಆದರೆ ಸದ್ಯಕ್ಕೆ ಯಾವುದೇ ಜಯಂತಿಯ ರಜೆ ಕಡಿತಗೊಳಿಸದಿರಲು ಸರ್ಕಾರ ತೀರ್ಮಾನಿಸಿದೆ.
ಈ ವರ್ಷದ ರಜಾ ಕ್ಯಾಲೆಂಡರ್ ಈಗಾಗಲೇ ಬಿಡುಗಡೆಯಾಗಿರುವುದರಿಂದ ಸದ್ಯಕ್ಕೆ ಈ ಪರಿಷ್ಕರಣೆ ಅಸಾಧ್ಯ. ಮುಂದಿನ ವರ್ಷದಿಂದ ಜಾರಿಯಾಗಬಹುದು ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಸರ್ಕಾರ ಈಗ ರಾಜ್ಯಪತ್ರ ಹೊರಡಿಸಿ ರಜೆಯನ್ನು ನಾಲ್ಕನೇ ಶನಿವಾರದ ರಜೆಯನ್ನು ಅಧಿಕೃತಗೊಳಿಸಿದೆ.