– 5 ಸಾವಿರ ಕೇಂದ್ರಗಳಲ್ಲಿ ಲಸಿಕೆ ಲಭ್ಯ
ಮಂಗಳೂರು: ಎಪ್ರಿಲ್ 1 ರಿಂದ 45 ವರ್ಷ ವಯಸ್ಸು ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡಲಿದ್ದು, ಒಟ್ಟು 5 ಸಾವಿರ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುವುದು. ಜನರು ಸ್ವಯಂಪ್ರೇರಿತರಾಗಿ ಬರಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದರು.
Advertisement
ದಕ್ಷಿಣ ಕನ್ನಡ ಜಿಲ್ಲೆಯ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಭೆ ನಡೆಸಿದ ಬಳಿಕ ಅವರು ಮಾತನಾಡಿದರು. ಈಗಾಗಲೇ 3 ಸಾವಿರ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಹೊಸದಾಗಿ 2 ಸಾವಿರ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುವುದು. ಒಟ್ಟು 5 ಸಾವಿರ ಕೇಂದ್ರಗಳಲ್ಲಿ ಲಸಿಕೆ ಸಿಗಲಿದೆ. ಒಂದು ಕೇಂದ್ರದಲ್ಲಿ 100 ಮಂದಿ ಲಸಿಕೆ ಪಡೆದರೆ 5 ಲಕ್ಷ ಹಾಗೂ 50 ಮಂದಿ ಲಸಿಕೆ ಪಡೆದರೆ, ಎರಡೂವರೆ ಲಕ್ಷ ಜನರಿಗೆ ಲಸಿಕೆ ನೀಡಬಹುದು. ಹೀಗಾಗಿ ಜನರು ಸ್ವಯಂಪ್ರೇರಿತರಾಗಿ ಲಸಿಕೆ ಪಡೆಯಲು ಬರಬೇಕು ಎಂದು ಕೋರಿದರು.
Advertisement
ಕೇರಳಕ್ಕೂ ದಕ್ಷಿಣ ಕನ್ನಡಕ್ಕೂ ಅವಿನಾಭಾವ ಸಂಬಂಧ. ಈ ಎರಡು ಪ್ರದೇಶಗಳ ನಡುವೆ ಹೆಚ್ಚು ಜನರು ಸಂಚರಿಸುತ್ತಾರೆ. ಆರ್ ಟಿಪಿಸಿಆರ್ ನೆಗೆಟಿವ್ ವರದಿ ಪರೀಕ್ಷಿಸಬೇಕು ಎಂಬ ಮಾರ್ಗಸೂಚಿ ನಿಯಮವೂ ಇದೆ. ಬಿಗಿಯಾದ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸೂಚನೆ ನೀಡುತ್ತೇನೆ. ಹೆಚ್ಚು ಸೋಂಕಿತ ಪ್ರಕರಣಗಳು ಕಂಡುಬರುತ್ತಿಲ್ಲ. ಆದರೂ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಗಡಿಭಾಗ ಆಗಿರುವುದರಿಂದ ಎಚ್ಚರಕೆಯಿಂದಿರಬೇಕು. ಕೋವಿಡ್ ಲಸಿಕೆ ನೀಡುವ ಪ್ರಮಾಣ ಹೆಚ್ಚಿಸಬೇಕು. ಜಿಲ್ಲೆಯ ಆರೋಗ್ಯ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಲಸಿಕೆ ಪಡೆದು ಬೇರೆಯವರಿಗೆ ಸ್ಫೂರ್ತಿ ನೀಡಬೇಕು ಎಂದರು.
Advertisement
Advertisement
ದಕ್ಷಿಣ ಕನ್ನಡದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಕೆಲಸ ನಡೆಯುತ್ತಿದೆ. ಇನ್ನಷ್ಟು ಕಾರ್ಯ ಚುರುಕು ಆಗಬೇಕಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ನಷ್ಟು ಉತ್ತಮ ರೀತಿಯಲ್ಲಿ ಜನಸಾಮಾನ್ಯರಿಗೆ ಸೇವೆ ದೊರೆಯುವಂತೆ ಮಾಡಬೇಕಿದೆ. ತಜ್ಞ ವೈದ್ಯರು ತಮ್ಮ ಕ್ಷೇತ್ರದಲ್ಲಿ ಶಸ್ತ್ರಚಿಕಿತ್ಸೆಗಳನ್ನು ಹೆಚ್ಚಿಸಬೇಕೆಂದು ಸೂಚಿಸಲಾಗಿದೆ. ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಶೇ.40 ರಷ್ಟು ಪ್ರಗತಿಯಾಗಿದೆ. ಇನ್ನೂ ಶೇ.60 ಗುರಿಯನ್ನು ತಲುಪಬೇಕಿದೆ. ಜಿಲ್ಲೆಯ ಎಲ್ಲ ಪಿಎಚ್ ಸಿಗಳಲ್ಲಿ ಕಾಂಪೌಂಡ್, ಕೈತೋಟವನ್ನು ಗ್ರಾಮ ಪಂಚಾಯಿತಿ ಯೋಜನೆಗಳಡಿ ಕೈಗೊಳ್ಳಬೇಕೆಂದು ಸೂಚನೆ ನೀಡಲಾಗಿದೆ ಎಂದರು.