ದಕ್ಷಿಣ ಆಫ್ರಿಕಾದಲ್ಲಿ ಸೇತುವೆ ಮೇಲಿಂದ ಬಸ್‌ ಬಿದ್ದು 45 ಪ್ರಯಾಣಿಕರು ಸಾವು – 8 ವರ್ಷದ ಬಾಲಕಿ ಸೇಫ್‌

Public TV
1 Min Read
south africa bus accident

ಕೇಪ್‌ಟೌನ್‌: ದಕ್ಷಿಣ ಆಫ್ರಿಕಾದ ಲಿಂಪೊಪೊ ಪ್ರಾಂತ್ಯದಲ್ಲಿ ಈಸ್ಟರ್ ಸಮ್ಮೇಳನಕ್ಕೆ ತೆರಳುತ್ತಿದ್ದ ಬಸ್ ಸೇತುವೆ ಮೇಲಿನಿಂದ ಬಿದ್ದ ಪರಿಣಾಮ ಕನಿಷ್ಠ 45 ಜನರು ಸಾವನ್ನಪ್ಪಿದ್ದಾರೆ. ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತರೆಲ್ಲರೂ ನೆರೆಯ ರಾಷ್ಟ್ರವಾದ ಬೋಟ್ಸ್ವಾನಾದ ರಾಜಧಾನಿ ಗ್ಯಾಬೊರೊನ್‌ನಿಂದ ಈಸ್ಟರ್ ಸಮ್ಮೇಳನಕ್ಕಾಗಿ ಚರ್ಚ್‌ಗೆ ಪ್ರಯಾಣಿಸುತ್ತಿದ್ದ ಯಾತ್ರಾರ್ಥಿಗಳು ಎಂದು ದಕ್ಷಿಣ ಆಫ್ರಿಕಾ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (ಎಸ್‌ಎಬಿಸಿ) ತಿಳಿಸಿದೆ.

ಎಂಟು ವರ್ಷದ ಬಾಲಕಿ ಮಾತ್ರ ಬದುಕುಳಿದಿದ್ದಾಳೆ ಎಂದು ಎಸ್‌ಎಬಿಸಿ ಹೇಳಿದೆ. ಆಕೆಯನ್ನು ಆಸ್ಪತ್ರೆಗೆ ಏರ್‌ಲಿಫ್ಟ್ ಮಾಡಲಾಗಿದೆ. ಮೊಕೊಪಾನೆ ಮತ್ತು ಮಾರ್ಕೆನ್ ನಡುವಿನ ಮಮತ್ಲಕಲಾ ಪರ್ವತದ ಹಾದಿಯಲ್ಲಿ ಅಪಘಾತ ಸಂಭವಿಸಿದೆ. ಬಸ್ ಬಿದ್ದ ನಂತರ ಬೆಂಕಿ ಹೊತ್ತಿಕೊಂಡಿದೆ ಎಂದು ವರದಿಯಾಗಿದೆ.

ಅಪಘಾತಕ್ಕೆ ಕಾರಣ ಏನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಚಾಲಕನ ನಿಯಂತ್ರಣ ತಪ್ಪಿ ಅಪಘಾತವಾಗಿರಬಹುದು. ಬಸ್ ಸೇತುವೆಯ ಕೆಳಗೆ ಸುಮಾರು 50 ಮೀಟರ್‌ ಆಳದಷ್ಟು ಕಂದಕಕ್ಕೆ ಬಿದ್ದ ಕೂಡಲೇ ಬೆಂಕಿ ಹೊತ್ತು ಕೊಂಡಿದೆ ಎಂದು ಪ್ರಾಂತ್ಯದ ಸಾರಿಗೆ ಇಲಾಖೆ ಮಾಹಿತಿ ನೀಡಿದೆ.

ಮೃತ ಪ್ರಯಾಣಿಕರ ಶವಗಳನ್ನು ಹೊರ ತೆಗೆಯುವ ಕಾರ್ಯಾಚರಣೆ ನಡೆಯುತ್ತಿದೆ. ಕೆಲ ದೇಹಗಳು ಗುರುತಿಸಲು ಸಾಧ್ಯವಾಗದಷ್ಟು ಸುಟ್ಟುಹೋಗಿವೆ. ದಕ್ಷಿಣ ಆಫ್ರಿಕಾದ ಸಾರಿಗೆ ಸಚಿವ ಸಿಂಡಿಸಿವೆ ಚಿಕುಂಗಾ ಅವರು, ಮೃತದೇಹಗಳನ್ನು ಬೋಟ್ಸ್ವಾನಾಗೆ ಹಿಂದಿರುಗಿಸಲಿದ್ದಾರೆ ಎಂದು ವರದಿಯಾಗಿದೆ.

Share This Article