45 ದಿನದಿಂದ ಕರೆಂಟ್ ಇಲ್ಲದೆ ಕತ್ತಲಲ್ಲಿ ಕಾಫಿನಾಡ ಅತ್ತಿಗುಂಡಿ ಗ್ರಾಮ

Public TV
1 Min Read
attigundi village chikkamagaluru

– ಚಾರ್ಜ್‌ ಮಾಡಿಕೊಳ್ಳಲಾಗದೇ ಮೊಬೈಲ್‌ಗಳನ್ನು ಮೂಲೆಗೆ ಎಸೆದ ಜನ!

ಚಿಕ್ಕಮಗಳೂರು: ಮಲೆನಾಡು ಹಾಗೂ ಪಶ್ಚಿಮ ಘಟ್ಟಗಳ ತಪ್ಪಲಿನ ಧಾರಾಕಾರ ಮಳೆಯಿಂದ ತಾಲೂಕಿನ ಮುಳ್ಳಯ್ಯನಗಿರಿ ತಪ್ಪಲಿನಲ್ಲಿರುವ ಅತ್ತಿಗುಂಡಿ ಕುಗ್ರಾಮ ಕಳೆದ 45 ದಿನಗಳಿಂದ ಕರೆಂಟ್ ಇಲ್ಲದೆ ಕತ್ತಲಲ್ಲಿ ಬದುಕುವಂತಾಗಿದೆ.

ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಇರುವ ಈ ಕುಗ್ರಾಮದ ಸುತ್ತಮುತ್ತ ಕಳೆದ ಒಂದೂವರೆ ತಿಂಗಳಿನಿಂದಲೂ ಧಾರಾಕಾರ ಮಳೆ ಸುರಿಯುತ್ತಿದೆ. ಕರ್ನಾಟಕದ ಅತ್ಯಂತ ಎತ್ತರದ ಪ್ರದೇಶ ಎಂಬ ಖ್ಯಾತಿಗೆ ಪಾತ್ರವಾಗಿರುವ ಮುಳ್ಳಯ್ಯನಗಿರಿಯ ಮಳೆಗೆ ಮಲೆನಾಡು ಅಕ್ಷರಶಃ ಕಂಗಾಲಾಗಿದೆ. ಅತ್ತಿಗುಂಡಿ ಮಾರ್ಗದಲ್ಲಿ ಹತ್ತಾರು ವಿದ್ಯುತ್ ಕಂಬಗಳು ಧರೆಗುರುಳಿದ್ದು, ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.

chikkamagaluru electricity

ಭಾರೀ ಮಳೆ ಗಾಳಿಯಿಂದ ಮುರಿದುಬಿದ್ದ ವಿದ್ಯುತ್ ತಂತಿ ಹಾಗೂ ಕಂಬಗಳನ್ನ ದುರಸ್ತಿ ಮಾಡುವುದು ಅಸಾಧ್ಯವಾಗಿದೆ. ಜೊತೆಗೆ ಮೇಲಿಂದ ಮೇಲೆ ವಿದ್ಯುತ್ ತಂತಿಗಳು ಹಾಗೂ ಕಂಬಗಳು ಮುರಿದು ಬಿದ್ದ ಪರಿಣಾಮ ಮೆಸ್ಕಾಂ ಸಿಬ್ಬಂದಿಗೆ ಲೈನ್ ದುರಸ್ತಿ ಮಾಡುವುದು ಕೂಡ ಅಸಾಧ್ಯವಾಗಿದೆ. ಹಾಗಾಗಿ, ಕಳೆದ ಒಂದೂವರೆ ತಿಂಗಳಿಂದಲೂ ಕೂಡ ಈ ಗ್ರಾಮ ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ. ಮೊಬೈಲ್ ಚಾರ್ಜ್ ಕೂಡ ಮಾಡಿಕೊಳ್ಳಲಾಗಿದೆ ಗ್ರಾಮಸ್ಥರು ಮೊಬೈಲ್‌ಗಳನ್ನ ಮೂಲೆಗೆ ಎಸೆದಿದ್ದಾರೆ.

ಗ್ರಾಮದ ಯುವಕರು ಹಾಗೂ ಪುರುಷರು ಬೈಕಿನಲ್ಲಿ ನಗರಕ್ಕೆ ಬಂದಂತಹ ವೇಳೆಯಲ್ಲಿ ಮೊಬೈಲ್ ಚಾರ್ಜ್ ಮಾಡಿಕೊಂಡು ಕಾಲ ಕಳೆಯುತ್ತಿದ್ದಾರೆ. ಈ ಮಧ್ಯೆ ನಗರದಿಂದ ಅತ್ತಿಗುಂಡಿ ಹಾಗೂ ದತ್ತಪೀಠಕ್ಕೆ ನಿತ್ಯ ಸರ್ಕಾರಿ ಹಾಗೂ ಖಾಸಗಿ ಬಸ್ ಕೂಡ ಸಂಚಾರ ಮಾಡುತ್ತಿದ್ದವು. ಆದರೆ, ಭಾರಿ ಗಾಳಿ ಮಳೆಯಿಂದ ಗುಡ್ಡಗಳು ಜರುಗಿತು. ರಸ್ತೆ ಕುಸಿದ ಪರಿಣಾಮ ಕಳೆದ 45 ದಿನಗಳಿಂದ ಈ ಭಾಗಕ್ಕೆ ಬಸ್ ಸಂಚಾರ ಕೂಡ ಸ್ಥಗಿತಗೊಂಡಿದೆ.

ಮುಳ್ಳಯ್ಯನಗಿರಿ ತಪ್ಪಲಿನ ಹತ್ತಕ್ಕೂ ಹೆಚ್ಚಿನ ಹಳ್ಳಿಯ ಜನರ ಬದುಕು ಇದೇ ರೀತಿ ಇದೆ. ಹಾಗಾಗಿ ಇಲ್ಲಿನ ಜನ ಒಂದೆಡೆ ಕರೆಂಟ್ ಇಲ್ಲ ಮತ್ತೊಂದೆಡೆ ಬಸ್ ಇಲ್ಲ, ಕೂಲಿಯೂ ಇಲ್ಲ. ಮನೆಯಿಂದ ಹೊರ ಬಂದರೆ ಮಳೆ. ಇಲ್ಲವಾದರೆ ಅಕ್ಕ ಪಕ್ಕದವರು ಕಾಣದಂತಹ ಮಂಜು. ಹಾಗಾಗಿ, ಇಲ್ಲಿನ ಜನ ಕಳೆದ ಒಂದೂವರೆ ತಿಂಗಳಿನಿಂದಲೂ ಕೂಡ ಒಂದು ರೀತಿಯ ನಾಗರಿಕ ಪ್ರಪಂಚದ ಸಂಪರ್ಕವೇ ಇಲ್ಲದಂತೆ ಕಾಲ ಕಳೆಯುತ್ತಿದ್ದಾರೆ.

Share This Article