ನವದೆಹಲಿ: 45 ವರ್ಷಗಳ ಭಾರತ ಚೀನಾ ಗಡಿಯಲ್ಲಿ ಗುಂಡಿನ ಸದ್ದು ಮೊಳಗಿದೆ. ಪೂರ್ವ ಲಡಾಕ್ ಗಡಿಯಲ್ಲಿ ಕಳೆದ ರಾತ್ರಿ ಸೈನಿಕರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಯುದ್ಧದ ಕಾರ್ಮೋಡ ಆವರಿಸುವಂತೆ ಮಾಡಿದೆ.
ಸೆಪ್ಟೆಂಬರ್ 7ರ ರಾತ್ರಿ ಪ್ಯಾಂಗಾಂಗೊ ತ್ಸೋ ಸರೋವರದ ದಕ್ಷಿಣ ದಂಡೆಯ ಶೆನ್ಪಾವೋ ಪರ್ವತದಲ್ಲಿ ಎಲ್‍ಎಸಿ (ನೈಜ ನಿಯಂತ್ರಣ ರೇಖೆ)ಯನ್ನು ಭಾರತೀಯ ಪಡೆಗಳು ದಾಟಿದೆ. ಗಸ್ತು ತಿರುಗುತ್ತಿದ್ದ ಚೀನಾ ಸೈನಿಕರು ಎಲ್‍ಎಸಿ ದಾಟಿದ ಭಾರತೀಯ ಸೈನಿಕರು ಜೊತೆಗೆ ಮಾತುಕತೆಗೆ ತೆರಳಿದ್ದರು. ಈ ವೇಳೆ ಭಾರತೀಯ ಸೈನಿಕರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಚೀನಾ ಆರೋಪಿಸಿದೆ.
ಚೀನಾದ ಆರೋಪಕ್ಕೆ ಭಾರತವೂ ಪ್ರತ್ಯುತ್ತರ ನೀಡಿದ್ದು, ಗುಂಡಿನ ದಾಳಿ ನಡೆಸಿದ್ದು ಚೀನಾ ಸೈನಿಕರು ಎಂದು ಪ್ರತ್ಯಾರೋಪ ಮಾಡಿದೆ. ಎಲ್‍ಎಸಿಯಲ್ಲಿರುವ ಭಾರತದ ಮುಂಚೂಣಿ ಪ್ರದೇಶದ ಆಕ್ರಮಣಕ್ಕೆ ಚೀನಾ ನಿನ್ನೆ ರಾತ್ರಿ ಪ್ರಯತ್ನ ಮಾಡಿದೆ. ನಮ್ಮ ಸೈನಿಕರು ಇದನ್ನು ತಡೆಯುವ ಪ್ರಯತ್ನ ಮಾಡಿದ್ದಾರೆ. ಈ ಬೆನ್ನಲ್ಲೆ ಚೀನಾ ಸೈನಿಕರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎಂದು ಹೇಳಿದೆ.
1975ರ ಬಳಿಕ ಮೊದಲ ವಾರ್ನಿಂಗ್ ಶಾಟ್
ಭಾರತ ಚೀನಾ ನಡುವೆ ಕಡೆಯದಾಗಿ 1975ರಲ್ಲಿ ಗುಂಡಿನ ಕಾಳಗ ನಡೆದಿತ್ತು. ಅರುಣಾಚಲ ಪ್ರದೇಶದ ತುಲುಂಗ್ ಲಾ ಪಾಸ್ ಗಡಿ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಅಸ್ಸಾಂ ರೈಫಲ್ಸ್ ನಾ ನಾಲ್ಕು ಯೋಧರನ್ನು ಚೀನಾ ಸೇನೆ ಹತ್ಯೆ ಮಾಡಿತ್ತು. ಇದಕ್ಕೂ ಮೊದಲು 1967ರಲ್ಲಿ ನಾಥು ಲಾ ಮತ್ತು ಚೋ ಲಾ ಬಳಿ ನಡೆದ ಭಾರತ ಮತ್ತು ಚೀನಾ ಸೈನಿಕರ ಸಂಘರ್ಷದಲ್ಲಿ ಭಾರತದ 88 ಮತ್ತು ಚೀನಾದ 340 ಸೈನಿಕರು ಸಾವನ್ನಪ್ಪಿದರು.
ಇದಾದ ಬಳಿಕ ಗಡಿಯಲ್ಲಿ ಗಸ್ತು ತಿರುಗುವ ಸೈನಿಕರನ್ನು ನಿಶ್ಯಸ್ತ್ರಗೊಳಿಸುವ ಒಪ್ಪಂದ ಮಾಡಿಕೊಳ್ಳಲಾಯಿತು. ಹೀಗಾಗೀ ಗಡಿಯಲ್ಲಿ ದೊಣ್ಣೆ ಕಲ್ಲುಗಳಿಂದ ಸೈನಿಕರು ಬಡಿದಾಡಿಕೊಳ್ಳುತ್ತಿದ್ದರು. ಜೂನ್ 15ರಂದು ಗಾಲ್ವಾನ್ ನದಿ ಕಣಿವೆ ವ್ಯಾಪ್ತಿಯಲ್ಲಿ ಭಾರತದ 20 ಸೈನಿಕರು ಹುತಾತ್ಮರಾದ ಬಳಿಕ ಕೇಂದ್ರ ಸರ್ಕಾರ ನಿಶ್ಯಸ್ತ್ರೀಕರಣ ಒಪ್ಪಂದ ಸೇರಿ ಎಲ್ಲ ಗಡಿ ಒಪ್ಪಂದಗಳನ್ನು ರದ್ದು ಮಾಡಿತ್ತು.
ಒಪ್ಪಂದ ಮಾಡಿಕೊಂಡಿದ್ದು ಯಾಕೆ?
ಭಾರತ ಮತ್ತು ಚೀನಾ ನಡುವೆ ಅಂತಾರಾಷ್ಟ್ರೀಯ ಗಡಿ ರೇಖೆ ಇಲ್ಲದ ಕಾರಣ ಗಡಿಯಲ್ಲಿ ಈ ರೀತಿ ಕಿತ್ತಾಟಗಳು ನಡೆಯುತಿತ್ತು. ಎರಡು ದೇಶಗಳ ಗಡಿಯನ್ನು ವಾಸ್ತವ ಗಡಿ ರೇಖೆಯಿಂದ(ಎಲ್‍ಎಸಿ – ಲೈನ್ ಆಫ್ ಆಕ್ಚುವಲ್ ಕಂಟ್ರೋಲ್) ಗುರುತಿಸಲಾಗಿದೆ. ಆದರೆ ಹಲವು ಭಾಗಗಳಲ್ಲಿ ಭಾರತ ಮತ್ತು ಚೀನಾದ ನಡುವಿನ ಗಡಿಗಳು ನಿರ್ಧಾರವಾಗಿಲ್ಲ. ಹೀಗಾಗಿ ಹಲವು ಬಾರಿ ಎರಡು ಕಡೆಯ ಸೈನಿಕರು ಗಡಿಯಲ್ಲಿ ಪಹರೆ ಕಾಯುತ್ತಿದ್ದಾಗ ಕಿತ್ತಾಟಗಳು ನಡೆಯುತ್ತಿದ್ದವು. ಎರಡು ಕಡೆಯಿಂದಲೂ ಪ್ರತಿರೋಧಗಳು ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ 1993, 1996ರಲ್ಲಿ ಭಾರತ ಮತ್ತು ಚೀನಾ ನಡುವೆ ಒಪ್ಪಂದ ನಡೆಯಿತು.
1993ರ ಒಪ್ಪಂದದ ಪ್ರಕಾರ ಎಲ್‍ಎಸಿ ದಾಟಿ ಯಾರೇ ಒಳಬಂದರೂ ಅವರಿಗೆ ಎಚ್ಚರಿಕೆ ನೀಡಿ ಕಳುಹಿಸಬೇಕು. 1996ರ ಪ್ರಕಾರ ಎಲ್‍ಎಸಿಯ ಎರಡು ಕಿ.ಮೀ ವ್ಯಾಪ್ತಿಯಲ್ಲಿ ಎರಡು ದೇಶಗಳು ಯಾವುದೇ ಸ್ಫೋಟ ನಡೆಸಬಾರದು. ಗುಂಡಿನ ದಾಳಿ ನಡೆಸಕೂಡದು ಎಂಬ ಒಪ್ಪಂದಕ್ಕೆ ಬರಲಾಗಿದೆ. ಇಲ್ಲಿಯವರೆಗೆ ಚೀನಾ ಗಡಿಯಲ್ಲಿ ಭಾರತದ ಸೈನಿಕರು ಈ ಒಪ್ಪಂದಕ್ಕೆ ಬದ್ಧವಾಗಿದ್ದರು. ಆದರೆ ಗಲ್ವಾನ್ ಘರ್ಷಣೆಯ ಬಳಿಕ ಭಾರತ ಗಡಿ ಒಪ್ಪಂದ ರದ್ದು ಮಾಡಿದ್ದು ಸರ್ಕಾರ ಭಾರತೀಯ ಸೇನೆಗೆ ಪೂರ್ಣ ಅಧಿಕಾರವನ್ನು ನೀಡಿದೆ.
ಆತ್ಮ ರಕ್ಷಣೆಗಾಗಿ ಸಿಡಿಎಸ್(ಚೀಫ್ ಡಿಫೆನ್ಸ್ ಸ್ಟಾಫ್) ಬಿಪಿನ್ ರಾವತ್ ಮತ್ತು ಮೂರು ಸೇನೆಯ ಮುಖ್ಯಸ್ಥರು ಆತ್ಮರಕ್ಷಣೆಗಾಗಿ ಚೀನಾ ಗಡಿಯಲ್ಲಿ ಗುಂಡು ಹಾರಿಸಲು ಸೈನಿಕರಿಗೆ ಅನುಮತಿ ನೀಡಿದ್ದರು. ಗಲ್ವಾನ್ ಘರ್ಷಣೆಯ ಸಂದರ್ಭದಲ್ಲಿ ಚೀನಿ ಸೈನಿಕರು ಮೊಳೆಗಳನ್ನು ವೆಲ್ಡ್ ಮಾಡಿದ ಬೇಸ್ ಬಾಲ್ ಬ್ಯಾಟ್‍ನಂತಿರುವ ಕಬ್ಬಿಣದ ರಾಡ್‍ಗಳಿಂದ ಭಾರತೀಯ ಸೇನೆಯ ಮೇಲೆ ಹಲ್ಲೆ ಮಾಡಿದ ಹಿನ್ನೆಲೆಯಲ್ಲಿ ಸೈನಿಕರಿಗೆ ಸರ್ಕಾರ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದೆ.
ಈ ಒಪ್ಪಂದ ರದ್ದಾದ ಬಳಿಕ ಗಡಿಯಲ್ಲಿ 45 ವರ್ಷಗಳ ಗುಂಡಿನ ಸದ್ದು ಕೇಳಿಸಿದೆ. ಆದರೆ ಮಾತುಕತೆ ಹಂತದಲ್ಲಿ ಈ ರೀತಿಯ ಬೆಳವಣಿಗೆಗಳು ಗಡಿಯಲ್ಲಿ ಮತ್ತಷ್ಟು ಉದ್ವಿಗ್ನತೆ ಸೃಷ್ಟಿಯಾಗಲಿದ್ದು, ಇದು ಯುದ್ಧಕ್ಕೆ ನಾಂದಿಯಾಗಬಹುದು ಎಂದು ಸೇನಾ ಪರಿಣತರು ಕಳವಳ ವ್ಯಕ್ತಪಡಿಸಿದ್ದಾರೆ.