ನಿಯಾಮಿ: ಶುಕ್ರವಾರ ಮಸೀದಿಯ (Mosque) ಮೇಲೆ ಇಸ್ಲಾಂ ಉಗ್ರರು (Islamist Militants) ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 44 ಜನರು ಬಲಿಯಾಗಿ 13 ಮಂದಿ ಗಾಯಗೊಂಡ ಘಟನೆ ನೈಋತ್ಯ ನೈಜರ್‌ನಲ್ಲಿ (Niger) ನಡೆದಿದೆ.
ನೈಜರ್, ಬುರ್ಕಿನಾ ಫಾಸೊ ಮತ್ತು ಮಾಲಿಯ ತ್ರಿ-ಗಡಿ ಪ್ರದೇಶದ ಸಮೀಪದಲ್ಲಿರುವ ಕೊಕೊರೌ ಫೋಂಬಿಟಾ ಗ್ರಾಮದಲ್ಲಿ ಮಧ್ಯಾಹ್ನದ ಪ್ರಾರ್ಥನೆಯ ಸಮಯದಲ್ಲಿ ಈ ದಾಳಿ ನಡೆದಿದೆ.
ಇಸ್ಲಾಮಿಕ್ ಸ್ಟೇಟ್ ಅಂಗಸಂಸ್ಥೆಯಾದ ಇಸ್ಲಾಮಿಕ್ ಸ್ಟೇಟ್ ಇನ್ ದಿ ಗ್ರೇಟರ್ ಸಹರಾ(ISGS) ಗುಂಪಿನ ಉಗ್ರರು ಈ ದಾಳಿ ನಡೆಸಿದ್ದಾರೆ ಎಂದು ದೇಶದ ರಕ್ಷಣಾ ಸಚಿವಾಲಯ ತಿಳಿಸಿದೆ.
ಭಾರೀ ಶಸ್ತ್ರಸಜ್ಜಿತ ಜಿಹಾದಿಗಳು ಮುಸ್ಲಿಮರ ಪವಿತ್ರ ರಂಜಾನ್ ತಿಂಗಳಲ್ಲಿ ಪ್ರಾರ್ಥನೆಗಾಗಿ ಜನರು ಸೇರಿದ್ದ ವೇಳೆ ಮಸೀದಿಯನ್ನು ಸುತ್ತುವರೆದು ಈ ಹತ್ಯಾಕಾಂಡ ನಡೆಸಿದ್ದಾರೆ. ಮಸೀದಿಯನ್ನು ತೊರೆಯುವ ಮೊದಲು ಹತ್ತಿರದಲ್ಲಿದ್ದ ಮಾರುಕಟ್ಟೆ ಮತ್ತು ಮನೆಗಳಿಗೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆ. ನೈಜರ್ ಸರ್ಕಾರ ಮೂರು ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದೆ. ಇದನ್ನೂ ಓದಿ: ಕಂತೆ ಕಂತೆ ನೋಟು ಪತ್ತೆಯಾದ ಜಡ್ಜ್ ಮೇಲೆ ದಾಖಲಾಗಿತ್ತು ಸಿಬಿಐ ಎಫ್‌ಐಆರ್
2012 ರಲ್ಲಿ ಟುವಾರೆಗ್ ದಂಗೆ ನಡೆದು ಇಸ್ಲಾಮಿಸ್ಟ್ ಉಗ್ರಗಾಮಿಗಳು ಉತ್ತರ ಮಾಲಿಯಲ್ಲಿ ಭೂಪ್ರದೇಶವನ್ನು ವಶಪಡಿಸಿಕೊಂಡ ಬಳಿಕ ಪಶ್ಚಿಮ ಆಫ್ರಿಕಾದ ಸಹೇಲ್ ಪ್ರದೇಶದಲ್ಲಿ ದಂಗೆ ಪ್ರಾರಂಭವಾಯಿತು. ಅಂದಿನಿಂದ ಇದು ನೆರೆಯ ನೈಜರ್ ಮತ್ತು ಬುರ್ಕಿನಾ ಫಾಸೊಗೆ ಮತ್ತು ಇತ್ತೀಚೆಗೆ ಟೋಗೊ ಮತ್ತು ಘಾನಾದಂತಹ ಕರಾವಳಿ ಪಶ್ಚಿಮ ಆಫ್ರಿಕಾದ ದೇಶಗಳ ಉತ್ತರಕ್ಕೆ ಹರಡಿದೆ.
ಪಟ್ಟಣಗಳು, ಹಳ್ಳಿಗಳು, ಮಿಲಿಟರಿ,ಪೊಲೀಸ್ ಪೋಸ್ಟ್‌ಗಳು ಮತ್ತು ಸೇನಾ ಬೆಂಗಾವಲು ವಾಹನಗಳ ಮೇಲೆ ಉಗ್ರರು ದಾಳಿ ನಡೆಸುತ್ತಿದ್ದಾರೆ. ಈ ದಾಳಿಯಿಂದ ಇಲ್ಲಿಯವರೆಗೆ ಲಕ್ಷಾಂತರ ಜನರು ಸಾವನ್ನಪ್ಪಿದ್ದರೆ ಲಕ್ಷಾಂತರ ಮಂದಿ ಸುರಕ್ಷಿತ ಸ್ಥಳಕ್ಕೆ ವಲಸೆ ಹೋಗಿದ್ದಾರೆ.