ಮುಂಬೈ: ಪುಣೆಯ 43 ವರ್ಷದ ವ್ಯಕ್ತಿ ಮತ್ತು ಅವರ ಮಗ ಇಬ್ಬರೂ ಒಟ್ಟಿಗೆ ಈ ಬಾರಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದಿದ್ದರು. ಆದರೆ ಪರೀಕ್ಷೆಯಲ್ಲಿ ಅಪ್ಪ ಪಾಸ್ ಆಗಿದ್ದು, ಮಗ ಫೇಲ್ ಆಗಿದ್ದಾನೆ.
ಖಾಸಗಿ ಉದ್ಯೋಗದಲ್ಲಿರುವ ಪುಣೆ ನಗರದ ಬಾಬಾಸಾಹೇಬ್ ಅಂಬೇಡ್ಕರ್ ಡಯಾಸ್ ಪ್ಲಾಟ್ ನಿವಾಸಿ ಭಾಸ್ಕರ್ ವಾಘಮಾರೆ ಅವರು 7ನೇ ತರಗತಿಯ ಬಳಿಕ ವಿದ್ಯಾಭ್ಯಾಸ ತ್ಯಜಿಸಿ ತಮ್ಮ ಕುಟುಂಬಕ್ಕಾಗಿ ಕೆಲಸ ಮಾಡಲು ಆರಂಭಿಸಿದ್ದರು. ಹೀಗಾಗಿ ಅವರಿಗೆ ಓದಲು ಸಾಧ್ಯವಾಗಲಿಲ್ಲ. ಆದರೆ 30 ವರ್ಷಗಳ ನಂತರ ತಮ್ಮ ಮಗನೊಂದಿಗೆ ಈ ವರ್ಷ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಹಾಜರಾಗಿದ್ದರು. ಶುಕ್ರವಾರ ಮಹಾರಾಷ್ಟ್ರ ಸ್ಟೇಟ್ ಬೋರ್ಡ್ ಆಫ್ ಸೆಕೆಂಡರಿ ಮತ್ತು ಹೈಯರ್ ಸೆಕೆಂಡರಿ ಎಜುಕೇಶನ್ ನಡೆಸಿದ 10ನೇ ತರಗತಿಯ ವಾರ್ಷಿಕ ಪರೀಕ್ಷೆ ಫಲಿತಾಂಶವನ್ನು ಪ್ರಕಟಿಸಿದ್ದು, ಭಾಸ್ಕರ್ ವಾಘಮಾರೆ ಪಾಸ್ ಆಗಿದ್ದಾರೆ. ಇದನ್ನೂ ಓದಿ: ಸದ್ಗುರು ಕಾಲು ಮುಟ್ಟಿ ನಮಸ್ಕರಿಸಿದ BSY – ಭಾಷಣದ ವೇಳೆ ಕೆಮ್ಮಿದಾಗ ನೀರು ತಂದುಕೊಟ್ಟ ಜಗ್ಗಿ ವಾಸುದೇವ್
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನಗೆ ಓದಬೇಕೆಂಬ ಆಸೆ ಇತ್ತು. ಆದರೆ ಕುಟುಂಬದ ಜವಾಬ್ದಾರಿಗಳಿಂದ ಮತ್ತು ಜೀವನವನ್ನು ಸಾಗಿಸಲು ಓದಲು ಸಾಧ್ಯವಾಗಲಿಲ್ಲ. ಕೆಲ ದಿನಗಳ ಹಿಂದೆ ಮತ್ತೆ ಓದುವುದನ್ನು ಆರಂಭಿಸಬೇಕು ಮತ್ತು ಕೆಲವು ಕೋರ್ಸ್‍ಗಳನ್ನು ಮಾಡಬೇಕೆಂದು ಅಂದುಕೊಂಡಿದ್ದೆ. ಆದ್ದರಿಂದ 10ನೇ ತರಗತಿ ಪರೀಕ್ಷೆ ಬರೆಯಲು ನಿರ್ಧರಿಸಿದೆ. ಇದೇ ವೇಳೆ ನನ್ನ ಮಗ ಕೂಡ 10ನೇ ತರಗತಿ ಪರೀಕ್ಷೆ ಹಾಜರಾಗುತ್ತಿದ್ದನು ಮತ್ತು ಇದು ನನಗೆ ಸಹಾಯಕವಾಗಿತ್ತು. ಕೆಲಸ ಮುಗಿಸಿ ಮನೆಗೆ ಬಂದ ನಂತರ ನಾನು ಪ್ರತಿದಿನ ಓದುತ್ತಿದ್ದೆ. ನನ್ನ ಮಗನಿಗೆ ಪೂರಕ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಬೆಂಬಲಿಸುತ್ತೇನೆ ಮತ್ತು ಅವನು ಕೂಡ ಪರೀಕ್ಷೆಯಲ್ಲಿ ತೇರ್ಗಡೆಯಾಗುತ್ತಾನೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ನಂತರ ಮಾತನಾಡಿದ ಭಾಸ್ಕರ್ ವಾಘಮಾರೆ ಅವರ ಮಗ ಸಾಹಿಲ್, ನನ್ನ ತಂದೆ ಅಂದುಕೊಂಡಿದ್ದನ್ನು ಸಾಧಿಸಿರುವುದನ್ನು ಕಂಡು ನನಗೆ ಸಂತಸವಾಗಿದೆ. ಹಾಗೇ ನಾನು ಕೂಡ ಬಿಡುವುದಿಲ್ಲ. ನಾನು ಪೂರಕ ಪರೀಕ್ಷೆಗಳಿಗೆ ತಯಾರಿ ನಡೆಸಿ, ಎಲ್ಲಾ ಪರೀಕ್ಷೆಯಲ್ಲೂ ಉತ್ತೀರ್ಣನಾಗಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾನೆ. ಇದನ್ನೂ ಓದಿ: 52ನೇ ವಸಂತಕ್ಕೆ ಕಾಲಿಟ್ಟ ರಾಹುಲ್ ಗಾಂಧಿ – ಹುಟ್ಟುಹಬ್ಬದ ಸಂಭ್ರಮಾಚರಣೆಗೆ ಬ್ರೇಕ್ ಹಾಕಿದ್ದೇಕೆ?