– 2500 ಕೋಟಿ ರೂ. ಖರ್ಚು ಮಾಡಿ ಕಾಲುವೆ ನಿರ್ಮಾಣ
ರಾಂಚಿ: 42 ವರ್ಷ ಸಮಯ ತೆಗೆದುಕೊಂದು ನಿರ್ಮಾಣವಾಗಿದ್ದ ಕಾಲುವೆ ಉದ್ಘಾಟನೆಯಾದ 24 ಗಂಟೆಯೊಳಗೆ ಕೊಚ್ಚಿಕೊಂಡು ಹೋಗಿರುವ ಘಟನೆ ಜಾರ್ಖಂಡ್‍ನಲ್ಲಿ ನಡೆದಿದೆ.
ಜಾರ್ಖಂಡ್‍ನ ಗಿರಿದಿಹ್, ಹಝಾರಿಬಾಘ್ ಮತ್ತು ಬಕಾರೋ ಜಿಲ್ಲೆಗಳ 85 ಗ್ರಾಮಗಳಿಗೆ ನೀರು ಪೂರೈಕೆ ಮಾಡುವ ಸಲುವಾಗಿ ಈ ಕಾಲುವೆಯನ್ನು ನಿರ್ಮಿಸಲಾಗಿತ್ತು. ಇದನ್ನು ನಿರ್ಮಿಸಲು ಬರೋಬ್ಬರಿ 42 ವರ್ಷಗಳು ಬೇಕಾಯಿತು. ಆದರೆ, ಉದ್ಘಾಟನೆಯಾದ ಕೇವಲ 24 ಗಂಟೆಯೊಳಗೇ ಅದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಈ ಕಾಲುವೆ 404.17 ಕಿ.ಮೀ ಉದ್ದವಿದ್ದು, 2,500 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು.
Advertisement
ಮುಖ್ಯಮಂತ್ರಿ ರಘುಬರ್ ದಾಸ್ ಅವರು ಈ ಕಾಲುವೆಯನ್ನು ಗುರುವಾರ ಸಾರ್ವಜನಿಕರಿಗೆ ಮುಕ್ತ ಮಾಡಿದ್ದರು. ಅವರು ಉದ್ಘಾಟನೆ ಮಾಡಿ ಹೋದ ಕೇವಲ 24 ಗಂಟೆಯೊಳಗೆ ಕಾಲುವೆಯಲ್ಲಿ ಬಿರುಕು ಕಾಣಿಸಿಕೊಂಡು ಒಡೆದು ಹೋಗಿದೆ. ಇದರಿಂದ ಕಾಲುವೆಯ ಸುತ್ತಮುತ್ತಲಿನ ಗ್ರಾಮಗಳು ಜಲಾವೃತಗೊಂಡಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಘಟನೆ ಸಂಭವಿಸಿದ ಬಳಿಕ ಸ್ಥಳೀಯರು ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಕಾಲುವೆಯ ದುರಸ್ಥಿ ಕಾರ್ಯ ನಡೆಯುತ್ತಿದೆ.
Advertisement
Advertisement
1978ರಲ್ಲಿ 12 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಕಾರ್ಯವನ್ನು ಆರಂಭಿಸಲಾಗಿತ್ತು. ಆದರೆ ನಿಧಾನಗತಿಯಲ್ಲಿ ಸಾಗಿದ ಕಾಮಗಾರಿ ಅಂತಿಮವಾಗಿ ನಿರ್ಮಾಣ ವೆಚ್ಚ 2,500 ಕೋಟಿ ರೂಪಾಯಿಗೆ ತಲುಪಿತ್ತು. ಆದರೆ ಕಾಲುವೆ ನಿರ್ಮಾಣ ಮಾಡಲು ತಗುಲಿದ ಹಣವಷ್ಟೂ ನೀರಿನಲ್ಲಿ ಹೋಮ ಮಾಡಿದಂತಾಗಿದೆ.
Advertisement
1978ರಲ್ಲಿ ಬಿಹಾರದ ಮಾಜಿ ರಾಜ್ಯಪಾಲ ಜಗನ್ನಾಥ್ ಕೌಶಲ್ ಅವರು ಈ ಕಾಲುವೆ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದರು. ಆದರೆ ಸರ್ಕಾರಗಳ ಬದಲಾವಣೆ ಜೊತೆಗೆ ಇನ್ನಿತರ ಕಾರಣಗಳಿಂದ ಕಾಲುವೆ ನಿರ್ಮಾಣ ಕಾರ್ಯ ಸ್ಥಗಿತಗೊಂಡಿತ್ತು. ಬಳಿಕ 2003ರಲ್ಲಿ ಜಾರ್ಖಂಡ್ ಸಿಎಂ ಅರ್ಜುನ್ ಮುಂಡ ಅವರು ಮತ್ತೆ ಕಾಲುವೆ ನಿರ್ಮಾಣ ಕಾರ್ಯವನ್ನು ಪುನಾರಂಭಿಸಿದರು. ಆಗಲೂ ಕೂಡ ಕೆಲಸ ನಿಧಾನವಾಗಿ ಮತ್ತೆ ಸ್ಥಗಿತವಾಯ್ತು.
ನಂತರ 2012ರಲ್ಲಿ ಮತ್ತೆ ಟೆಂಡರ್ ಕರೆದು ಈ ಯೋಜನೆಯನ್ನು ಮುಂಬೈ ಮೂಲದ ನಿರ್ಮಾಣ ಕಂಪನಿಗೆ ನೀಡಲಾಗಿತ್ತು. ಈ ಕಂಪನಿ ಕೊನೆಗೆ ಕಾಲುವೆ ನಿರ್ಮಾಣ ಕಾರ್ಯವನ್ನು ಪೂರ್ತಿಗೊಳಿಸಿತು. ಆದರೆ 42 ವರ್ಷ ಸಮಯದಲ್ಲಿ ನಿರ್ಮಾಣವಾದ ಕಾಲುವೆ ಕೇವಲ 24 ಗಂಟೆಯೊಳಗೆ ಕೊಚ್ಚಿಹೋಗಿದೆ.
ಜಲಸಂಪನ್ಮೂಲ ಇಲಾಖೆ ಮೊದಲು ಈ ಕಾಲುವೆಯಲ್ಲಿ ಪ್ರತಿನಿತ್ಯ 800 ಕ್ಯೂಸೆಕ್ ನೀರನ್ನು ಹರಿಸಲು ನಿರ್ಧರಿಸಿತ್ತು. ಬಳಿಕ ಅವಶ್ಯಕತೆಗೆ ಅನುಗುಣವಾಗಿ 1700 ಕ್ಯೂಸೆಕ್ಸ್ ನೀರನ್ನು ಬಿಡಲು ಯೋಜನೆ ಹೂಡಿತ್ತು ಎನ್ನಲಾಗಿದೆ. ಕಳಪೆ ಗುಣಮಟ್ಟದ ಸಾಮಾಗ್ರಿ ಬಳಸಿ ಕಾಲುವೆ ನಿರ್ಮಾಣ ಮಾಡಿದ್ದಕ್ಕೆ ಹೀಗೆ ಕೊಚ್ಚಿಕೊಂಡು ಹೋಗಿದೆ ಎಂದು ಜನರು ಆರೋಪಿಸುತ್ತಿದ್ದಾರೆ. ಆದರೆ ಅಧಿಕಾರಿಗಳು ಮತ್ತು ನಿರ್ಮಾಣ ಕಂಪನಿ ಮಾತ್ರ ಕಾಲುವೆಯಲ್ಲಿ ಹೆಗ್ಗಣ ಅಥವಾ ಇಲಿಗಳು ಕೊರೆದು, ಹೊಂಡಗಳಾಗಿ ಈ ಅನಾಹುತ ಸಂಭವಿಸಿದೆ ಎಂದು ಆರೋಪವನ್ನು ತಳ್ಳಿಹಾಕಿವೆ.