400ಕ್ಕೂ ಹೆಚ್ಚು ವಲಸೆ ಕಾರ್ಮಿಕರ ಕುಟುಂಬಗಳಿಗೆ ಸೋನು ಸೂದ್ ಆರ್ಥಿಕ ನೆರವು

Public TV
2 Min Read
Sonu sood A

ಮುಂಬೈ: ಬಾಲಿವುಡ್ ನಟ ಸೋನು ಸೂದ್ ಈಗಾಗಲೇ ಲಾಕ್‍ಡೌನ್ ವೇಳೆ ಸಂಕಷ್ಟದಲ್ಲಿದ್ದ ನೂರಾರು ಜನರಿಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇದೀಗ ನಟ ಸೋನು ಸೂದ್ ಮತ್ತೊಮ್ಮೆ ಕೊರೊನಾ ಸಂಕಷ್ಟದಲ್ಲಿರುವ ಕುಟುಂಬದವರಿಗೆ ಸಹಾಯದ ಹಸ್ತ ಚಾಚಿದ್ದಾರೆ.

ಕೊರೊನಾ ಪ್ರೇರಿತ ರಾಷ್ಟ್ರವ್ಯಾಪಿ ಲಾಕ್‍ಡೌನ್‍ನಿಂದಾಗಿ ಮೃತ ಮತ್ತು ಗಾಯಗೊಂಡಿರುವ ವಲಸೆ ಕಾರ್ಮಿಕರ 400ಕ್ಕೂ ಹೆಚ್ಚು ಕುಟುಂಬಗಳಿಗೆ ಆರ್ಥಿಕ ನೆರವು ನೀಡುವುದಾಗಿ ನಟ ಸೋನು ಸೂದ್ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಸಿಲುಕಿದ್ದ ನೂರಾರು ಕನ್ನಡಿಗರಿಗೆ ಬಸ್ ವ್ಯವಸ್ಥೆ ಕಲ್ಪಿಸಿದ ಸೋನು ಸೂದ್

Sonu sood B

ನಟ ಸೋನು ಸೂದ್ ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಸೇರಿದಂತೆ ವಿವಿಧ ರಾಜ್ಯಗಳ ಅಧಿಕಾರಿಗಳನ್ನು ಸಂಪರ್ಕಿಸಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಅಲ್ಲದೇ ಕೊರೊನಾದಿಂದ ಮೃತ ವಲಸಿಗರ ಸಂಬಂಧಿತ ಮಾಹಿತಿ, ವಿಳಾಸ ಮತ್ತು ಬ್ಯಾಂಕ್ ವಿವರಗಳನ್ನು ಪಡೆದುಕೊಂಡಿದ್ದಾರೆ.

“ಮೃತ ಅಥವಾ ಗಾಯಗೊಂಡಿರುವ ವಲಸಿಗರ ಕುಟುಂಬಗಳಿಗೆ ಸುರಕ್ಷಿತ ಭವಿಷ್ಯವನ್ನು ಹೊಂದಲು ನಾನು ಅವರಿಗೆ ಸಹಾಯ ಮಾಡಲು ನಿರ್ಧರಿಸಿದ್ದೇನೆ. ಅವರನ್ನು ಬೆಂಬಲಿಸುವುದು ನನ್ನ ವೈಯಕ್ತಿಕ ಜವಾಬ್ದಾರಿ ಎಂದು ನಾನು ಭಾವಿಸುತ್ತೇನೆ” ಎಂದು ಸೋನು ಸೂದ್ ಹೇಳಿದರು.

SONU SOOD

177 ಯುವತಿಯರಿಗೆ ಸಹಾಯ:
ಕೊರೊನಾ ಹಿನ್ನೆಲೆಯಲ್ಲಿ ಲಾಕ್‍ಡೌನ್ ಶುರುವಾದಾಗಿನಿಂದ ಒಡಿಶಾದ ಸುಮಾರು 177 ಯುವತಿಯರು ಕೇರಳದಲ್ಲಿ ಸಿಲುಕಿಕೊಂಡಿದ್ದರು. ಅಂದಿನಿಂದ ಯುವತಿಯರು ತಮ್ಮ ಊರಿಗೆ ಹೋಗಲು ಯಾವುದೇ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದರು. ಈ ಯುವತಿಯರ ಬಗ್ಗೆ ಭುವನೇಶ್ವರದಲ್ಲಿರುವ ಸ್ನೇಹಿತರೊಬ್ಬರ ಮೂಲಕ ಸೋನು ಸೂದ್ ತಿಳಿದುಕೊಂಡಿದ್ದರು.

ತಕ್ಷಣ ಯುವತಿಯರಿಗೆ ಸಹಾಯ ಮಾಡಲು ಮುಂದಾಗಿದ್ದು, ನಂತರ ವಿಮಾನ ನಿಲ್ದಾಣಗಳನ್ನು ತೆರೆಯಲು ಕೇರಳ ಮತ್ತು ಒಡಿಶಾ ಸರ್ಕಾರಗಳಿಂದ ಅನೇಕ ಅನುಮತಿಗಳನ್ನು ಪಡೆದುಕೊಂಡಿದ್ದರು. ಬಳಿಕ ಸೋನು ಸೂದ್ ಯುವತಿಯರ ರಕ್ಷಣೆ ಮಾಡಿದ್ದು, ಅಲ್ಲಿಂದ ಅವರನ್ನು ವೈಮಾನಿಕ ಮಾರ್ಗದ ಮೂಲಕ ಒಡಿಶಾಕ್ಕೆ ಕಳುಹಿಸಿದ್ದರು.

jpg

ಈ ಹಿಂದೆ ಸೋನು ಸೂದ್ ಅವರು ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳ ಜೊತೆಗೆ ಚರ್ಚಿಸಿ ಕಲಬುರಗಿಯಿಂದ ಮಹಾರಾಷ್ಟ್ರದ ಥಾಣೆಗೆ ಬಂದಿದ್ದ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಕಳುಹಿಸಲು ಅನುಮತಿ ಪಡೆದಿದ್ದರು. ಈ ಮೂಲಕ ತಮ್ಮ ಸ್ವಂತ ಖರ್ಚಿನಲ್ಲಿ ಒಟ್ಟು ಹತ್ತು ಬಸ್‍ಗಳ ವ್ಯವಸ್ಥೆ ಮಾಡಿ ಥಾಣೆಯಿಂದ ಕಲಬುರಗಿಗೆ ತಾವೇ ಮುಂದೆ ನಿಂತು ಕಳುಹಿಸಿಕೊಟ್ಟಿದ್ದ. ಅಷ್ಟೇ ಅಲ್ಲದೆ ವಲಸೆ ಕಾರ್ಮಿಕರಿಗೆ ಊಟದ ಕಿಟ್‍ಗಳನ್ನು ನೀಡಿ ಕನ್ನಡಿಗರ ಬಗ್ಗೆ ಕಾಳಜಿ ತೋರಿದ್ದರು.

Share This Article
Leave a Comment

Leave a Reply

Your email address will not be published. Required fields are marked *