– ಸಾಕ್ಷಿ ಇಲ್ಲದೇ ಕೊಲೆ ಕೇಸ್ ಖುಲಾಸೆ ಆಗಿರುತ್ತೆ
– ನಮ್ಮ ವಿರುದ್ಧದ ಆರೋಪ ಸುಳ್ಳು ಎಂದಿದ್ದ ಬಿಜೆಪಿ
ಬಾಗಲಕೋಟೆ: ನನ್ನನ್ನು ಕೇಳ್ತಿರಲ್ಲ. ನೀವೇನು ವಕೀಲರೇ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಮಾಧ್ಯಮಗಳ ಮೇಲೆಯೇ ಗರಂ ಆದ ಪ್ರಸಂಗ ಇಂದು ನಡೆಯಿತು.
71 ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಿಎಂ ಇಂದು ಬಾಗಲಕೋಟೆಗೆ (Bagalkote) ಆಗಮಿಸಿದರು. ಈ ವೇಳೆ ನಮ್ಮ ವಿರುದ್ಧ 40% ಕಮಿಷನ್ ಆರೋಪ ಸುಳ್ಳು ಎನ್ನುವುದು ಲೋಕಾಯುಕ್ತ ತನಿಖೆಯಿಂದ (Lokayukta Enquiry) ಬೆಳಕಿಗೆ ಬಂದಿದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಸಂಬಂಧಿಸಿದಂತೆ ಇಂದು ಸಿಎಂಗೆ ಪ್ರಶ್ನೆ ಕೇಳಲಾಯಿತು.
40% ಕಮಿಷನ್ ಆರೋಪಕ್ಕೆ ಸಾಕ್ಷಿ ಇಲ್ಲದೇ ನೀವು ಹೇಗೆ ಆರೋಪ ಮಾಡಿದ್ದೀರಿ ಎಂಬ ಪ್ರಶ್ನೆಗೆ ಸಿಎಂ ಸಿಡಿಮಿಡಿಗೊಂಡರು. ಯಾವುದೋ ಒಂದು ಕ್ರಿಮಿನಲ್ ಪ್ರಕರಣದಲ್ಲಿ ದೂರು ನೀಡಿರುತ್ತೇವೆ. ಅದಕ್ಕೆ ಸಾಕ್ಷಿಯನ್ನು ಒದಗಿಸಿರುತ್ತೇವೆ. ಆದರೆ ಆ ಸಾಕ್ಷಿಯಲ್ಲಿ ಒಂದೊಂದು ಸಾರಿ ಅನುಮಾನ ಬಂದಿರುತ್ತೆ. ಆ ಅನುಮಾನದ ಲಾಭ ಆರೋಪಿಗಳಿಗೆ ಹೋಗುತ್ತದೆ ಎಂದು ಉತ್ತರಿಸಿದರು. ಇದನ್ನೂ ಓದಿ: Mangaluru| ಬೀಚ್ ರೆಸಾರ್ಟ್‌ನ ಈಜುಕೊಳದಲ್ಲಿ ಮುಳುಗಿ ಮೈಸೂರಿನ ಮೂವರು ಯುವತಿಯರ ದುರ್ಮರಣ
40% ಕಮಿಷನ್ ಆರೋಪವನ್ನು ಕೆಂಪಣ್ಣ (Kempanna) ಮಾಡಿದ್ದರು. ಅವರ ಹೇಳಿಕೆಯ ಆಧಾರ ಮೇಲೆ ನಾವು ಆರೋಪ ಮಾಡಿದ್ದೆವು. ಆದಕ್ಕೆ ನಾನು ಕಮಿಷನ್ ರಚನೆ ಮಾಡಿದೆವು. ನಾನು ಆಯೋಗದ ವರದಿ ನೋಡಿಲ್ಲ. ಬಿಜೆಪಿಯವರ ಮಾತನ್ನು ನನ್ನ ಬಳಿ ಕೇಳಬೇಡಿ. ಕೆಲವೊಂದು ವಿಚಾರಗಳು ಸಾಕ್ಷಿ ಇಲ್ಲದೇ ವಜಾ ಆಗುತ್ತದೆ. ಹಾಗೆಂದ ಮಾತ್ರಕ್ಕೆ ತಪ್ಪೇ ಆಗಿಲ್ಲ ಎಂದಲ್ಲ ಎಂದರು.
ಈಗ ಒಂದು ಕೊಲೆ ಆಗಿರುತ್ತೆ. ಸಾಕ್ಷಿ ಇಲ್ಲದೇ ಖುಲಾಸೆ ಆಗರುತ್ತದೆ. ಹಂಗೆಂದು ಕೊಲೆ ಆಗಿರಲ್ವಾ? ಒಂದು ಪ್ರಕರಣದಲ್ಲಿ ವಜಾ ಆಗಿದ್ದಕ್ಕೆ ತಪ್ಪೇ ಆಗಿಲ್ಲ ಅಂತ ಅಲ್ಲ. ನಾನು ವಕೀಲನಾಗಿ ಕೆಲಸ ಮಾಡಿದ್ದೇನೆ. ಆನೇಕ ಪ್ರಕರಣಗಳು ಸಾಕ್ಷಿ ಇಲ್ಲದೇ ವಜಾ ಆಗಿರುತ್ತವೆ ಎಂದು ಹೇಳಿದರು.
ಕೈ ಶಾಸಕರಿಗೆ ಕಾಂಗ್ರೆಸ್‌ನಲ್ಲೇ 50 ಕೋಟಿ ರೂ. ಆಫರ್ ನೀಡಲಾಗಿದೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಕೇಳಿದ ಪ್ರಶ್ನೆಗೂ ಸಿಎಂ ಗರಂ ಆದರು. ಬಿಜೆಪಿಯವರು ಹೇಳಿದನ್ನು ಕೇಳಲು ನೀವೇ ಅಗಬೇಕಾ? ನನ್ನ ಆರೋಪ ಬೇರೆ ಇದೆ. ದೇ ಹ್ಯಾವ್ ಟ್ರೈಡ್ ಬಟ್ ಫೇಲ್ಡ್. ಈಗ ನನ್ನ ಮೇಲೆ ಸುಳ್ಳು ಕೇಸ್ ಹಾಕಲು ಶುರು ಮಾಡಿದ್ದಾರೆ ಎಂದು ಸಿಟ್ಟು ಹೊರಹಾಕಿದರು.