ಬೆಂಗಳೂರು: ಬಿಜೆಪಿ ವಿರುದ್ಧ ಸುಳ್ಳು ಜಾಹೀರಾತು ಆರೋಪ ಪ್ರಕರಣದಲ್ಲಿ (40 Percent Commission Advertisement Case) ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಗೆ (Rahul Gandi) ರಿಲೀಫ್ ಸಿಕ್ಕಿದೆ. ಖುದ್ದು ಹಾಜರಾಗಿದ್ದ ರಾಹುಲ್ ಗಾಂಧಿಗೆ ಜನಪ್ರತಿನಿಧಿಗಳ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿ, ಜುಲೈ 30ಕ್ಕೆ ವಿಚಾರಣೆ ಮುಂದೂಡಿದೆ. ರಾಹುಲ್ ಜಾಮೀನಿಗೆ ಡಿಕೆಸು ಪ್ರಾಪರ್ಟಿ ಶ್ಯೂರಿಟಿ ನೀಡಿದ್ದಾರೆ.
ಬಿಜೆಪಿ ವಿರುದ್ಧ 40% ಕಮಿಷನ್ ಆರೋಪ ಜಾಹೀರಾತು ಸೇರಿದಂತೆ ಸುಳ್ಳು ಜಾಹೀರಾತುಗಳನ್ನು ನೀಡಿದ ಆರೋಪ ಪ್ರಕರಣದಲ್ಲಿ ರಾಹುಲ್ ಗಾಂಧಿ ಖುದ್ದು ನ್ಯಾಯಾಲಯಕ್ಕೆ ಹಾಜರಾಗಿದ್ದರು. 42ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ (Special Court of Representatives) ಮುಂದೆ ಹಾಜರಾಗಿ ಕಟಕಟೆಯಲ್ಲಿ ನಿಂತಿದ್ದರು. ರಾಹುಲ್ ಅರ್ಜಿಯನ್ನ ಪುರಸ್ಕರಿಸಿದ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿತು. ಅಲ್ಲದೇ ಜುಲೈ 30ಕ್ಕೆ ವಿಚಾರಣೆ ಮುಂದೂಡಿದೆ. ಮಾಜಿ ಸಂಸದ ಡಿ.ಕೆ ಸುರೇಶ್ (DK Suresh), ರಾಹುಲ್ ಗಾಂಧಿ ಅವರಿಗೆ 50 ಸಾವಿರ ರೂ. ಮೌಲ್ಯದ ಪ್ರಾಪರ್ಟಿ ಶ್ಯೂರಿಟಿ ನೀಡಿದ್ದು, ಜಾಮೀನು ಮಂಜೂರು ಮಾಡಲಾಗಿದೆ. ನ್ಯಾಯಾಲಯಕ್ಕೆ ರಾಹುಲ್ ಜೊತೆಗೆ ಡಿಕೆಶಿ, ಸಿದ್ದರಾಮಯ್ಯ ಜೊತೆಯಾಗಿ ಆಗಮಿಸಿ ಪ್ರಕ್ರಿಯೆ ಮುಗಿಸಿ ಜೊತೆಯಲ್ಲಿ ತೆರಳಿದ್ದು ವಿಶೇಷವಾಗಿತ್ತು.
Advertisement
Advertisement
ಅಂದಹಾಗೆ ಬಿಜೆಪಿ ಪರಿಷತ್ ಸದಸ್ಯ ಕೇಶವ ಪ್ರಸಾದ್ ನೀಡಿದ್ದ ಖಾಸಗಿ ದೂರನ್ನ ಜನಪ್ರತಿನಿಧಿಗಳ ನ್ಯಾಯಾಲಯ ವಿಚಾರಣೆಗೆ ಅಂಗೀಕರಿಸಿತ್ತು. ಈ ಹಿನ್ನೆಲೆಯಲ್ಲಿ ಆರೋಪಗಳಿಗೆ ಸಮನ್ಸ್ ಜಾರಿಗೊಳಿಸಲಾಗಿತ್ತು. ಜೂ.1ರಂದು ವಿಚಾರಣೆ ನಡೆಸಿದ್ದ 42ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರಿಗೆ ಜಾಮೀನು ಮಂಜೂರು ಮಾಡಿತ್ತು. ಆದ್ರೆ ಎರಡು ಬಾರಿ ವಿಚಾರಣೆಗೆ ವಿನಾಯಿತಿ ಪಡೆದು ಗೈರಾಗಿದ್ದ ರಾಹುಲ್ ಗಾಂಧಿಗೆ ಜೂನ್ 7 ರಂದು ಕಡ್ಡಾಯವಾಗಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗಬೇಕೆಂದು ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಕೋರ್ಟ್‌ಗೆ ಖುದ್ದು ಹಾಜರಾದ ರಾಹುಲ್ ಗಾಂಧಿ ಜಾಮೀನು ಪ್ರಕ್ರಿಯೆ ಮುಗಿಸಿದ್ದಾರೆ.
Advertisement
Advertisement
ರಾಹುಲ್ ಕೋರ್ಟ್ ಆಗಮಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆವರಣ, ಕೋರ್ಟ್ ಹಾಲ್ ನಲ್ಲಿ ಜನ ಕಿಕ್ಕಿರಿದಿದ್ದರು. ಅಲ್ಲದೆ ನ್ಯಾಯಾಲಯದ ಹೊರಗೆ ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿ ರಾಹುಲ್ ಪರ ಘೋಷಣೆಗಳನ್ನ ಕೂಗಿದ್ರು. ಇನ್ನೊಂದೆಡೆ ರಾಹುಲ್ ಖುದ್ದು ಹಾಜರಾದ ಹಿನ್ನೆಲೆಯಲ್ಲಿ ಸಿವಿಲ್ ಕೋರ್ಟ್ ಸುತ್ತಮುತ್ತ ಹೆಚ್ಚಿನ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.
2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಮುನ್ನಾದಿನದಂದು ಕಾಂಗ್ರೆಸ್ ಪಕ್ಷದ ಜಾಹೀರಾತುಗಳು ಮತ್ತು ಪ್ರಚಾರದ ಘೋಷಣೆಗಳನ್ನು ವಿರೋಧಿಸಿ ಸಿದ್ದರಾಮಯ್ಯ, ಶಿವಕುಮಾರ್ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ನಾಯಕ ಕೇಶವ ಪ್ರಸಾದ್ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಬಿಜೆಪಿಯು ಸಾರ್ವಜನಿಕ ಕಾಮಗಾರಿಗಳ ನಿರ್ವಹಣೆಗಾಗಿ ಗುತ್ತಿಗೆದಾರರು ಮತ್ತು ಇತರರಿಂದ 40% ಕಮಿಷನ್ ಮಾಡುತ್ತಿದೆ ಎಂದು ಜಾಹೀರಾತುಗಳಲ್ಲಿ ಕಾಂಗ್ರೆಸ್ ಪಕ್ಷವು ಆರೋಪಿಸಿತ್ತು. ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ತನ್ನ ಪಕ್ಷದ ಸದಸ್ಯರನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ನಾಯಕರು ಸುಳ್ಳು ಜಾಹೀರಾತನ್ನು ಪ್ರಕಟಿಸಿದೆ ಎಂದು ಬಿಜೆಪಿ ತನ್ನ ದೂರಿನಲ್ಲಿ ಆರೋಪಿಸಿತ್ತು.