– ಸಿಸಿಟಿವಿಯಲ್ಲಿ ಸೆರೆಯಾಯ್ತು ದೃಶ್ಯ
ಬೆಂಗಳೂರು: ಖತರ್ನಾಕ್ ಕಳ್ಳರ ಗ್ಯಾಂಗ್‍ವೊಂದು ಬೆಳಗಿನ ಜಾವ ಮೊಬೈಲ್ ಶೋರೂಂನಲ್ಲಿದ್ದ ದುಬಾರಿ ಬೆಲೆಯ ಸುಮಾರು 40 ಮೊಬೈಲ್ ಫೋನ್‍ಗಳನ್ನು ಕದ್ದು ಪರಾರಿಯಾಗಿರುವ ಘಟನೆ ಸಿಲಿಕಾನ್ ಸಿಟಿಯ ಉತ್ತರಹಳ್ಳಿಯಲ್ಲಿ ನಡೆದಿದೆ.
ರಸ್ತೆಯಲ್ಲಿ ಸಾಗುವರಿಗೆ ಕಾಣಬಾರದು ಅಂತ ಕಳ್ಳರು ಶೋರೂಂ ಬಾಗಿಲಿಗೆ ಬೆಡ್‍ಶೀಟ್ ಅಡ್ಡ ಹಿಡಿದು ನಂತರ ಬಾಗಿಲು ಮುರಿದು ಮೊಬೈಲ್‍ಗಳನ್ನು ಕದ್ದಿರುವ ದೃಶ್ಯವು ಶೋರೂಂನಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಒಟ್ಟು ಆರು ಮಂದಿ ಖದೀಮರು ಈ ಕಳ್ಳತನದಲ್ಲಿ ಭಾಗಿಯಾಗಿದ್ದು, ಉತ್ತರಹಳ್ಳಿಯ ವಿವೋ ಬ್ರಾಂಡ್ ಮೊಬೈಲ್ ಶೋರೂಂನಲ್ಲಿ ಈ ಘಟನೆ ನಡೆದಿದೆ.
ದಾರಿಹೋಕರ ಸೋಗಿನಲ್ಲಿ ಒಟ್ಟು 6 ಮಂದಿ ಕಳ್ಳರು ಶೋರೂಂ ಬಳಿ ಬಂದಿದ್ದಾರೆ. ಬಳಿಕ ಶೋರೂಂ ಬಾಗಿಲಿಗೆ ಇಬ್ಬರು ಬೆಡ್‍ಶೀಟ್ ಅಡ್ಡ ಹಿಡಿದರೆ, ಇನ್ನುಳಿದವರು ಬಾಗಿಲನ್ನು ಒಡೆದಿದ್ದಾರೆ. ಈ ವೇಳೆ ಖತರ್ನಾಕ್ ಕಳ್ಳರ ಕೃತ್ಯ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇಡೀ ಮೊಬೈಲ್ ಶೋರೂಂನಲ್ಲಿದ್ದ ಅಷ್ಟೂ ಫೋನ್‍ಗಳನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ.
ಗುರುವಾರ ಬೆಳಗ್ಗೆ ಸುಮಾರು 4:30ರ ವೇಳೆಗೆ ಈ ಘಟನೆ ನಡೆದಿದೆ. ಉತ್ತರಹಳ್ಳಿ ಜೂಹು ಲಿಬಿನ್, ಲಿಯೂ ಹಾಗು ಜಿಂಗ್ಲಿಯವರಿಗೆ ಸೇರಿದ ಮೊಬೈಲ್ ಶೋರೂಂ ಇದಾಗಿದ್ದು, ಸುಮಾರು ಐದು ಲಕ್ಷ ಬೆಲೆಬಾಳುವ 40 ಮೊಬೈಲ್ ಫೋನುಗಳ ಕಳ್ಳತನವಾಗಿದೆ. ಈ ಕುರಿತು ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv