ವಾಷಿಂಗ್ಟನ್: ಅಮೆರಿಕ ಪ್ರವಾಸಕ್ಕೆ ತೆರೆಳಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ತಮ್ಮ ದೇಶದಲ್ಲಿ 40 ಉಗ್ರ ಸಂಘಟನೆಗಳಿವೆ ಎಂಬ ಸತ್ಯವನ್ನು ಕೊನೆಗೂ ಒಪ್ಪಿಕೊಂಡಿದ್ದಾರೆ.
ಪಾಕಿಸ್ತಾನದಲ್ಲಿ ಕಳೆದ 15 ವರ್ಷಗಳಿಂದ ಈವರೆಗೆ ಆಡಳಿತ ನಡೆಸಿದ ಸರ್ಕಾರಗಳು ಜಗತ್ತಿನ ಮುಂದೆ ಉಗ್ರರಿಗೆ ನೆಲೆ ನೀಡಿರುವ ಬಗ್ಗೆ ಸತ್ಯವನ್ನು ಹೇಳಿರಲಿಲ್ಲ. ಆದ್ರೆ ಇಮ್ರಾನ್ ಖಾನ್ ಅವರು ಈ ಬಗ್ಗೆ ಬಾಯಿಬಿಟ್ಟಿದ್ದಾರೆ. ಪಾಕಿಸ್ತಾನದಲ್ಲಿ 40 ವಿವಿಧ ಉಗ್ರಗಾಮಿ ಸಂಘಟನೆಗಳು ನೆಲೆಯೂರಿದೆ ಎಂಬ ನಿಜಾಂಶವನ್ನು ಬಿಚ್ಚಿಟ್ಟಿದ್ದಾರೆ.
Advertisement
Advertisement
ಭಯೋತ್ಪಾದನೆ ವಿರುದ್ಧ ಅಮೆರಿಕ ಸಾರಿದ ಸಮರದಲ್ಲಿ ನಾವು ಹೋರಾಡುತ್ತಿದ್ದೇವೆ. 9/11 ದಾಳಿಗೂ ಪಾಕಿಸ್ತಾನಕ್ಕೂ ಸಂಬಂಧವಿಲ್ಲ. ಅಲ್ ಖೈದಾ ಅಫ್ಘಾನಿಸ್ತಾನದ ಉಗ್ರ ಸಂಘಟನೆ. ಅಲ್ಲದೆ ತಾಲಿಬಾನ್ ಉಗ್ರ ಸಂಘಟನೆ ಪಾಕಿಸ್ತಾನದಲ್ಲಿ ಇಲ್ಲ. ಆದರೂ ಕೂಡ ನಾವು ಅಮೆರಿಕದ ಯುದ್ಧದಲ್ಲಿ ಭಾಗಿಯಾದೆವು. ಆದರೆ ದುರದೃಷ್ಟವಶಾತ್ ನಮ್ಮ ಪ್ರಯತ್ನಗಳು ವಿಫಲವಾದಾಗ ನಾವೇ ನಮ್ಮ ಸರ್ಕಾರವನ್ನು ದೂಷಿಸಬೇಕಾದ ಪರಿಸ್ಥಿತಿ ಬಂದಿದೆ. ವಾಸ್ತವಿಕ ಸತ್ಯಾಂಶವನ್ನು ನಾವು ಅಮೆರಿಕದ ಮುಂದೆ ಹೇಳಲಿಲ್ಲ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.
Advertisement
ಅಮೆರಿಕನ್ ಕಾಂಗ್ರೆಸ್ ಸದಸ್ಯರ ಪೈಕಿ ಪಾಕ್ ಪರ ಅಧ್ಯಕ್ಷೆಯಾಗಿರುವ ಶೈಲಾ ಜಾಕ್ಸನ್ ಲೀ ಆತಿಥ್ಯವನ್ನು ಆಯೋಜಿಸಿದ್ದರು. ಈ ಆತಿಥ್ಯದಲ್ಲಿ ಇಮ್ರಾನ್ ಖಾನ್ ಅವರು ಕೂಡ ಭಾಗಿಯಾಗಿದ್ದರು. ಈ ವೇಳೆ ಮಾತನಾಡುತ್ತಾ ದೇಶದಲ್ಲಿ ನಡೆಯುವ ಕೆಲವೊಂದು ವಿಷಯಗಳು ಪಾಕ್ ಸರ್ಕಾರದ ನಿಯಂತ್ರಣದಲ್ಲಿಲ್ಲ ಎನ್ನುವುದನ್ನು ಒಪ್ಪಿಕೊಂಡರು.
Advertisement
ದೇಶದ ಒಳಗೆ 40 ಉಗ್ರ ಸಂಘಟನೆಗಳಿವೆ. ದಶಕಗಳ ಕಾಲ ಪಾಕ್ ಈ ಸಂಘಟನೆಗಳಿಗೆ ಆಶ್ರಯ ನೀಡಿದೆ. ಆದರೆ ಈಗ ಅದು ನಮಗೆ ದುಬಾರಿಯಾಗಿದೆ. ಉಗ್ರರನ್ನು ಮಟ್ಟಹಾಕುವ ಸಮರದಲ್ಲಿ ಅಮೆರಿಕ ಗೆಲ್ಲಬೇಕು. ಹೀಗಾಗಿ ಅಮೆರಿಕ ಪಾಕ್ ಉಗ್ರರನ್ನು ಮಟ್ಟಹಾಕಲು ಇನ್ನಷ್ಟು ಶ್ರಮವಹಿಸಬೇಕೆಂದು ಹೇಳುತ್ತಿದೆ. ಆದರೆ ಪಾಕಿಸ್ತಾನ ಸ್ವತಃ ತನ್ನ ಅಸ್ತಿತ್ವಕ್ಕಾಗಿ ಹೋರಾಡುತ್ತಿದೆ ಎಂದು ತಿಳಿಸಿದ್ದಾರೆ.
ಪಾಕಿಸ್ತಾನ ಶಾಂತಿಯನ್ನು ಕಾಪಾಡುವುದರಲ್ಲಿ ನಿಯತ್ತಿನಿಂದ ಇರುತ್ತದೆ. ಅಲ್ಲದೆ ಎರಡು ದೇಶಗಳ ನಡುವೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳುತ್ತದೆ. ತಾಲಿಬಾನ್ ಸಂಘಟನೆಯ ಬಗ್ಗೆ ತಿಳಿಯಲು ಪಾಕಿಸ್ತಾನ ತನ್ನ ಎಲ್ಲಾ ಪ್ರಯತ್ನ ಮಾಡುತ್ತಿದೆ. ಆದರೆ ಈ ಕೆಲಸ ಬಹಳ ಕಷ್ಟಕರವಾಗಿದೆ. ಯಾಕೆಂದರೆ ಇದು ಅಫ್ಘಾನಿಸ್ತಾನದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟುಮಾಡುತ್ತದೆ. ಆದರೂ ಕೂಡ ಈ ಬಗ್ಗೆ ಕ್ರಮಕೈಗೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆ. ಇಡೀ ದೇಶವೇ ನಮ್ಮ ಬೆನ್ನ ಹಿಂದೆ ನಿಂತಿದೆ. ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲಸಬೇಕು ಎಂದು ಅಮೆರಿಕ ಗುರಿ ಹೊಂದಿದೆ. ಅಮೆರಿಕದ ಹಾದಿಯಲ್ಲೇ ನಾವು ಸಾಗುತ್ತಿದ್ದೇವೆ ಎಂದು ಖಾನ್ ಹೇಳಿದ್ದಾರೆ.
ಸದ್ಯ ಪಾಕಿಸ್ತಾನ ಪ್ರಧಾನಿ ಮೂರು ದಿನಗಳ ಅಮೆರಿಕ ಪ್ರವಾಸ ಮುಗಿಸಿ ದೇಶಕ್ಕೆ ವಾಪಸ್ ಹೋಗಿದ್ದಾರೆ. ಅಲ್ಲದೆ ಈ ಬಾರಿ ಅಮೆರಿಕ ಭೇಟಿ ಪಾಕ್- ಅಮೆರಿಕ ಸಂಬಂಧವನ್ನು ಉತ್ತಮಗೊಳಿಸಿ, ಗಟ್ಟಿಗೊಳಿಸಲಿದೆ ಎಂಬ ನಂಬಿಕೆಯನ್ನು ಪಾಕಿಸ್ತಾನ ಹೊಂದಿದೆ.