– ಕೃತ್ಯದಲ್ಲಿ ಬಿ ಗ್ರೇಡ್ ಬಾಲಿವುಡ್ ನಟಿಯರೂ ಭಾಗಿ
– ಸಹಕರಿಸಿದ್ದಕ್ಕೆ ಎನ್‍ಜಿಒಗಳಿಗೆ ಸರ್ಕಾರದ ಗುತ್ತಿಗೆ
ಭೋಪಾಲ್: ಮಧ್ಯಪ್ರದೇಶದ ಮಾಜಿ ರಾಜ್ಯಪಾಲರು, ರಾಜಕಾರಣಿಗಳು ಹಾಗೂ ಉನ್ನತ ಅಧಿಕಾರಿಗಳು, ಗಣ್ಯ ವ್ಯಕ್ತಿಗಳನ್ನು ಬಾಲಿವುಡ್‍ನ ಕೆಲವು ಬಿ-ಗ್ರೇಡ್ ನಟಿಯರು ಸೇರಿದಂತೆ 40ಕ್ಕೂ ಅಧಿಕ ಕಾಲ್ ಗರ್ಲ್ಸ್ ಸೇರಿ ಹನಿಟ್ರ್ಯಾಪ್ ಎಸಗಿದ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ.
ಈ ಕೃತ್ಯಕ್ಕೆ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ, ರಾಜ್ಯ ರಾಜ್ಯಪಾಲರು ಸೇರಿದಂತೆ ಹಲವು ಅಧಿಕಾರಿಗಳು ಗಣ್ಯ ವ್ಯಕ್ತಿಗಳು ಬಲಿಪಶುಗಳಾಗಿದ್ದಾರೆ. ಅಧಿಕಾರಿಗಳು ಹಾಗೂ ರಾಜಕಾರಣಿಗಳು ರಾಜಿ ಮಾಡಿಕೊಳ್ಳುವ ವೇಳೆ ಹಾಗೂ ಸೆಕ್ಸ್ ನಡೆಸುವ ವೇಳೆ ಚಿತ್ರೀಕರಿಸಿರುವ 92 ಎಚ್‍ಡಿ ವಿಡಿಯೋಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಈವರೆಗೆ ಎರಡು ಲ್ಯಾಪ್‍ಟಾಪ್‍ಗಳು ಮತ್ತು ಹಲವಾರು ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಬ್ಲ್ಯಾಕ್‍ಮೇಲ್ ಹಾಗೂ ಸುಲಿಗೆ ದಂಧೆ ಆರೋಪದ ಮೇಲೆ ಐವರು ಮಹಿಳೆಯರನ್ನು ಬಂಧಿಸಲಾಗಿದೆ.
Advertisement
Advertisement
ಮಧ್ಯಪ್ರದೇಶದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಎಡಿಜಿಪಿ) ಸಂಜೀವ್ ಶಮಿ ನೇತೃತ್ವದ ಪೊಲೀಸರ ವಿಶೇಷ ತನಿಖಾ ತಂಡ(ಎಸ್‍ಐಟಿ)ವು ಕಾಲ್ ಗರ್ಲ್ಸ್ ಚಿತ್ರೀಕರಿಸಿದ ಸ್ಥಳದಲ್ಲಿ ವಿಡಿಯೋಗಳನ್ನು ಹೊಂದಿರುವ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದೆ. ಈ ಪ್ರಕರಣದ ತನಿಖೆ ನಡೆಸಲು ಡಿ.ಶ್ರೀನಿವಾಸ್ ಅವರ ಜಾಗಕ್ಕೆ ಸಂಜೀವ್ ಶಮಿಯವರನ್ನು ನೇಮಿಸಲಾಗಿದೆ. ಈ ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್‍ವರ್ಗಿಯಾ ಅವರು ಆಕ್ರೋಶ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಸರ್ಕಾರವು ಬಿಜೆಪಿ ನಾಯಕರನ್ನು ಗುರಿಯಾಗಿಸಿಕೊಂಡು ತನಿಖೆ ನಡೆಸುತ್ತಿದೆ. ಈ ಕುರಿತು ಸಿಬಿಐನಂತಹ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಯಲಿ ಎಂದು ಒತ್ತಾಯಿಸಿದ್ದಾರೆ.
Advertisement
ಹನಿಟ್ರ್ಯಾಪ್ ಹೇಗೆ?
ಈ ಹನಿಟ್ರ್ಯಾಪ್ ಕಿಂಗ್‍ಪಿನ್ ಶ್ವೇತಾ ಸ್ವಾಪ್ನಿಲ್ ಜೈನ್ ಆಗಿದ್ದು, ಈಕೆ ಉನ್ನತ ಅಧಿಕಾರಿಗಳು, ಮಂತ್ರಿಗಳು ಹಾಗೂ ರಾಜಕಾರಣಿಗಳನ್ನು ಟಾರ್ಗೆಟ್ ಮಾಡಿ, ಆರಂಭದ ಸಂವಾದದ ನಂತರ ಅವರನ್ನು ಲೈಂಗಿಕತೆಗೆ ಆಹ್ವಾನಿಸುತ್ತಿದ್ದಳು. ಇದಕ್ಕಾಗಿ ಅಥಿತಿ ಗೃಹ ಅಥವಾ 5 ಸ್ಟಾರ್ ಹೋಟೆಲ್‍ಗಳಿಗೆ ಆಹ್ವಾನಿಸುತ್ತಾಳೆ. ವ್ಯಕ್ತಿಯು ಒಂದು ಬಾರಿ ಲೈಂಗಿಕತೆ ನಡೆಸಿದ ನಂತರ ಆ ವಿಡಿಯೋವನ್ನು ಮೊಬೈಲ್ ಅಥವಾ ಸೀಕ್ರೆಟ್ ಕ್ಯಾಮರಾ ಮೂಲಕ ಚಿತ್ರೀಕರಿಸಲಾಗುತ್ತದೆ. ಈ ಕುರಿತು ಶ್ವೇತಾಳ ಪತಿ ಸ್ವಾಪ್ನಿಲ್ ಜೈನ್ ನಿಂದ 6 ಹಾರ್ಡ್ ಡಿಸ್ಕ್ ಗಳನ್ನುವಶಪಡಿಸಿಕೊಳ್ಳಲಾಗಿದೆ ಎಂದು ಎಸ್‍ಐಟಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Advertisement
ಅಲ್ಲದೆ, ಕೆಲವು ಬಾರಿ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಮುಂಬೈ ಅಥವಾ ದೆಹಲಿಗೆ ಅಧಿಕೃತ ಪ್ರವಾಸಕ್ಕೆಂದು ತೆರಳಿದಾಗ ಅವರನ್ನು ಟಾರ್ಗೆಟ್ ಮಾಡಿ ಅವರ ಬೇಡಿಕೆಗೆ ಅನುಗುಣವಾಗಿ ಕೆಲ ಮಾಡೆಲ್ ಹುಡುಗಿಯರು ಹಾಗೂ ಬಾಲಿವುಡ್ ನಟಿಯರನ್ನು ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಕುರಿತು ಎಸ್‍ಐಟಿ ಅಧಿಕಾರಿಗಳು ಇಂತಹ ವಿಡಿಯೋಗಳನ್ನು ವಶಪಡಿಸಿಕೊಂಡ ನಂತರ ಯಾವ ನಟಿ ಎಂದು ಬಹಿರಂಗವಾಗಲಿದೆ.
ವಿಚಾರಣೆಯ ಸಮಯದಲ್ಲಿ ಶ್ವೇತಾ ಈ ಕುರಿತು ಮಾಹಿತಿ ನೀಡಿ, ಒಮ್ಮೆ ಮಂತ್ರಿ ಅಥವಾ ಕಾರ್ಯದರ್ಶಿ ಹನಿ ಟ್ರ್ಯಾಪ್‍ನಲ್ಲಿ ಸಿಕ್ಕಿಬಿದ್ದಾಗ ನಾನು ನಡೆಸುತ್ತಿರುವ ಎನ್‍ಜಿಓಗೆ ಸರ್ಕಾರದ ಕಾಂಟ್ರ್ಯಾಕ್ಟ್ ಕೊಡಿಸುವ ಪ್ರಯತ್ನ ನಡೆಸಿದ್ದೆ. ಪತಿ ನಡೆಸುತ್ತಿರುವ ಎನ್‍ಜಿಓಗೆ ಭೋಪಾಲ್ ಮುನ್ಸಿಪಲ್ ಕಾರ್ಪೋರೇಶನ್‍ನಿಂದ 8 ಕೋಟಿ ರೂ.ಗಳ ಗುತ್ತಿಗೆ ನೀಡಲಾಗಿದೆ ಎಂದು ಶ್ವೇತಾ ಒಪ್ಪಿಕೊಂಡಿದ್ದಾಳೆ. ಪಿಡಬ್ಲ್ಯೂಡಿ, ವಸತಿ, ಸಮಾಜ ಕಲ್ಯಾಣ ಸೇರಿದಂತೆ ಸರ್ಕಾರದ ಇತರೆ ಇಲಾಖೆಗಳ ಗುತ್ತಿಗೆಗಳನ್ನು ನೀಡಲಾಗಿದೆ. ಅಲ್ಲದೆ, ಮಾಜಿ ಮುಖ್ಯಮಂತ್ರಿಯೊಬ್ಬರು ಪೋಶ್ ಭೋಪಾಲ್‍ನ ಮಿನಾಲ್ ರೆಸಿಡೆನ್ಸಿಯಲ್ಲಿ ಒಂದು ಬಂಗಲೆಯನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ತಿಳಿಸಿದ್ದಾಳೆ.
ಶ್ವೇತಾ ಜೈನ್ ಜೊತೆಗೆ ಎಸ್‍ಐಟಿ ಬಂಧಿಸಲ್ಪಟ್ಟ ಮತ್ತೊಬ್ಬ ಮಹಿಳೆ ಆರತಿ ದಯಾಳ್ ವಿಚಾರಣೆ ವೇಳೆ ಇನ್ನಷ್ಟು ಮಾಹಿತಿ ಬಹಿರಂಗಪಡಿಸಿದ್ದು, ನಾನೂ ಸಹ ಹಿರಿಯ ಐಎಎಸ್ ಅಧಿಕಾರಿಯೊಬ್ಬರ ಸಂಪರ್ಕದಲ್ಲಿದ್ದೆ ಎಂದು ಒಪ್ಪಿಕೊಂಡಿದ್ದಾಳೆ. ಈ ಅಧಿಕಾರಿಗಳು ನನಗೆ ಒಂದು ಫ್ಲ್ಯಾಟ್‍ನ ವ್ಯವಸ್ಥೆ ಸಹ ಮಾಡಿದ್ದರು ಎಂದು ಸಹ ಒಪ್ಪಿಕೊಂಡಿದ್ದಾಳೆ. ಆರತಿ ಈ ಫ್ಲ್ಯಾಟ್ ಆಕ್ರಮಿಸಿಕೊಂಡ ನಂತರ ಅದನ್ನೇ ಅಕ್ರಮಗಳ ಅಡ್ಡ ಮಾಡಿಕೊಂಡಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜಕಾರಣಿಗಳು, ಅಧಿಕಾರಿಗಳು ಮತ್ತು ಸರ್ಕಾರದ ಉನ್ನತ ಎಂಜಿನಿಯರ್‍ಗಳು ರಾಜಿ ಮಾಡಿಕೊಳ್ಳುತ್ತಿದ್ದ ಸಂದರ್ಭದಲ್ಲಿನ ಫ್ಲ್ಯಾಟ್‍ನ ಕೋಣೆಗಳಲ್ಲಿ ಸಹ ರಹಸ್ಯ ಕ್ಯಾಮರಾಗಳನ್ನು ಅಳವಡಿಸುತ್ತಿದ್ದೆವು. ಸ್ಟಿಂಗ್ ಆಪರೇಷನ್ ನಡೆಸಲು ಕಾಲ್ ಗಲ್ರ್ಸ್ ನೇಮಿಸಿಕೊಳ್ಳುತ್ತಿದ್ದೆವು. ಮಂತ್ರಿಗಳನ್ನು ಸೆಳೆಯಲು ಕೆಲವು ಸಂದರ್ಭಗಳಲ್ಲಿ ಬಿ ಗ್ರೇಡ್ ಬಾಲಿವುಡ್ ನಾಯಕಿಯರು ಹಾಗೂ ಮಾಡೆಲ್‍ಗಳನ್ನು ತೊಡಗಿಸಿಕೊಳ್ಳುತ್ತಿದ್ದೆವು ಎಂದು ಮಾಹಿತಿ ಬಹಿರಂಗಪಡಿಸಿದ್ದಾರೆ.
ದಂಧೆಯ ಮಾಸ್ಟರ್ ಮೈಂಡ್ ಶ್ವೇತಾಳಂತೆಯೇ ಆರತಿ ಸಹ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಮಂತ್ರಿಗಳಿಂದ ಹೆಚ್ಚು ಹಣ ಪಡೆಯಲು ಎನ್‍ಜಿಓವನ್ನು ಸ್ಥಾಪಿಸಿದ್ದಳು. ವಿರಳ ಸಂದರ್ಭಗಳಲ್ಲಿ ಮಾತ್ರ ಸ್ಪೈ ಕ್ಯಾಮರಾ ಬಳಸುತ್ತಿದ್ದೆವು, ಹೆಚ್ಚಿನ ಸಂದರ್ಭಗಳಲ್ಲಿ ಎನ್‍ಜಿಓ ಮೂಲಕ ಸರ್ಕಾರದ ಹಣವನ್ನು ಸುಲಭವಾಗಿ ವರ್ಗಾಯಿಸುವಾಗ ಕ್ಯಾಮರಾ ಬಳಸುತ್ತಿದ್ದೆವು ಎಂದು ಇಬ್ಬರು ತಿಳಿಸಿದ್ದಾರೆ.
ಲ್ಯಾಬ್‍ಗಳಲ್ಲಿ ವಿಡಿಯೋಗಳನ್ನು ಪರೀಕ್ಷಿಸಿದ ನಂತರ, ಬ್ಲ್ಯಾಕ್‍ಮೇಲ್ ಮಾಡಿದ ವ್ಯಕ್ತಿಗಳನ್ನು ಗುರುತಿಸಲಾಗಿದೆ. ಗಣ್ಯ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಬಹುದಾಗಿದೆ. ಈ ಪ್ರಕರಣವೀಗ ರಾಜಕೀಯ ತಿರುವು ಪಡೆದುಕೊಂಡಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರಲ್ಲಿ ಪರ ವಿರೋಧದ ಚರ್ಚೆಗಳು ನಡೆಯುತ್ತಿವೆ. ಅಚ್ಚರಿಯ ಸಂಗತಿ ಎಂದರೆ ಈ ಹನಿ ಟ್ರ್ಯಾಪ್ ಪ್ರಕರಣದ ಸೂತ್ರಧಾರೆ ಶ್ವೇತಾ ಜೈನ್ 2013 ಮತ್ತು 2018ರ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ನಡೆಸಿದ್ದಳು.