ಮಂಗಳೂರು: ಕೊಡಗಿನ ಗಡಿಭಾಗ ಜೋಡುಪಾಲ ದುರಂತದ ಮಾದರಿಯಲ್ಲೇ ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಟ್ಟಕಡೆಯ ಗ್ರಾಮವಾಗಿರುವ ಕಲ್ಮಕಾರಿನ ಬಳಿಯಿರುವ ಕಡಮಕಲ್ ಎಸ್ಟೇಟ್ ವ್ಯಾಪ್ತಿಯಲ್ಲಿ ಬೃಹತ್ ಬೆಟ್ಟ ಕುಸಿದು ಅವಾಂತರ ಸೃಷ್ಟಿಯಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಬೃಹತ್ ಬೆಟ್ಟ ಕುಸಿದ ಪರಿಣಾಮ ಎಸ್ಟೇಟ್ ಒಳಗಿರುವ ಹೊಳೆಯ ಸೇತುವೆ ಕೊಚ್ಚಿ ಹೋಗಿದ್ದು, ಬೃಹತ್ ಮರಗಳು ಛಿದ್ರಗೊಂಡು ಬಿದ್ದಿವೆ. ಮೂರು ದಿನಗಳ ಹಿಂದೆ ಬಾಂಬ್ ಸ್ಫೋಟದ ರೀತಿಯಲ್ಲಿ ಭಾರೀ ಸದ್ದು ಕೇಳಿದ್ದು, ಇದರಿಂದ ಎಸ್ಟೇಟ್ ಕಾರ್ಮಿಕರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ನಿವಾಸಿಗಳು ಭಯ ಭೀತರಾಗಿದ್ದಾರೆ. ಅಲ್ಲದೇ ಎಸ್ಟೇಟ್ ನಲ್ಲಿರುವ 40 ಕ್ಕೂ ಹೆಚ್ಚು ತಮಿಳು ಕಾರ್ಮಿಕರು ಭಯದಿಂದ ಸ್ಥಳ ಬಿಟ್ಟು ಓಡಿಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಭೀಕರ ಸ್ಫೋಟದಿಂದಾಗಿ ಸುಮಾರು 40 ಎಕರೆಯಷ್ಟು ಅರಣ್ಯ ಪ್ರದೇಶದಲ್ಲಿರುವ ಮರಗಳು ಬುಡ ಸಮೇತ ನೀರಿನಲ್ಲಿ ಕೊಚ್ಚಿ ಹೋಗಿದೆ.
ಆದರೆ, ಈ ಘಟನೆಯನ್ನು ಜಿಲ್ಲಾಡಳಿತ ಮುಚ್ಚಿಟ್ಟಿದ್ದಲ್ಲದೇ, ಕುಗ್ರಾಮವಾಗಿರುವ ಕಾರಣಕ್ಕೆ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ತೆರಳಿರಲಿಲ್ಲ. ಸ್ಥಳೀಯರ ಮಾಹಿತಿ ಮೇರೆಗೆ ಮಾಧ್ಯಮದಲ್ಲಿ ವರದಿ ಬಂದ ಹಿನ್ನೆಲೆಯಲ್ಲಿ, ಎಚ್ಚೆತ್ತಗೊಂಡಿರುವ ಪುತ್ತೂರು ವಿಭಾಗಾಧಿಕಾರಿ ಕೃಷ್ಣಮೂರ್ತಿ ಸ್ಥಳಕ್ಕೆ ತೆರಳಿದ್ದು, ಬೆಟ್ಟಗಳ ಮೇಲೆ ಏನೋ ದುರಂತ ಸಂಭವಿಸಿರುವ ಸಾಧ್ಯತೆಯಿದೆ ಎಂದು ಒಪ್ಪಿಕೊಂಡಿದ್ದಾರೆ.
ಸದ್ಯ ಕೂಜುಮಲೆ ಅರಣ್ಯ ವ್ಯಾಪ್ತಿಯಲ್ಲಿ ಭೂಮಿ ಬಿರುಕು ಬಿಟ್ಟಿದ್ದು, ಆಸುಪಾಸಿನ ಕಲ್ಮಕಾರು, ಬಾಳುಗೋಡು ಗ್ರಾಮಗಳ 30ಕ್ಕೂ ಹೆಚ್ಚು ಮನೆಗಳ ನಿವಾಸಿಗಳನ್ನು ಸ್ಥಳಾಂತರ ಮಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv