– ಇಬ್ಬರ ರಕ್ಷಣೆ, ಇನ್ನಿಬ್ಬರು ನಾಪತ್ತೆ
ಗದಗ: ಭಾರೀ ಮಳೆಯಿಂದ ಮತ್ತೆ ಬೆಣ್ಣೆಹಳ್ಳದಲ್ಲಿ ಪ್ರವಾಹ ಉಂಟಾಗಿದ್ದು, ಹಳ್ಳ ದಾಟುವಾಗ ನಾಲ್ವರು ಯುವಕರು ಕೊಚ್ಚಿಹೋಗಿದ್ದರು. ಅವರಲ್ಲಿ ಇಬ್ಬರನ್ನು ರಕ್ಷಣೆ ಮಾಡಲಾಗಿದ್ದು, ಇನ್ನಿಬ್ಬರು ನಾಪತ್ತೆಯಾಗಿದ್ದಾರೆ.
ಜಿಲ್ಲೆಯ ರೋಣ ತಾಲೂಕಿನ ಮಾಳವಾಡ ಗ್ರಾಮದ ಬಳಿ ಈ ಘಟನೆ ನಡೆದಿದೆ. ನರಗುಂದ ತಾಲೂಕಿನ ಹದ್ಲಿ ಗ್ರಾಮದ ಕಳಸಪ್ಪ(30), ಈರಣ್ಣ(15), ಅಮೃತ್ ಹಾಗೂ ಇನ್ನೋರ್ವ ಯುವಕ ಮಾಳವಾಡ ಗ್ರಾಮದ ಬಳಿ ಬೆಣ್ಣೆಹಳ್ಳ ದಾಟುವಾಗ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದರು. ಅವರಲ್ಲಿ ಈರಪ್ಪ ಹಾಗೂ ಅಮೃತ್‍ನನ್ನು ಸ್ಥಳೀಯರು ಹಾಗೂ ಪೊಲೀಸರು ಸೇರಿ ರಕ್ಷಣೆ ಮಾಡಿದ್ದಾರೆ. ಆದರೆ ಉಳಿದ ಇಬ್ಬರು ನಾಪತ್ತೆಯಾಗಿದ್ದು, ಅವರಿಗಾಗಿ ಪೊಲೀಸರ ಶೋಧ ಕಾರ್ಯ ಮುಂದುವರಿಸಿದ್ದಾರೆ. ಇತ್ತ ನಾಪತ್ತೆಯಾದ ಯುವಕರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
Advertisement
Advertisement
ಇತ್ತ ಮಲಪ್ರಭಾ ಹಾಗೂ ಬೆಣ್ಣೆಹಳ್ಳ ಪ್ರವಾಹದ ಅಬ್ಬರಕ್ಕೆ ಹೊಳೆಆಲೂರ ನಿಂದ ಹೊಳೆಹಡಗಲಿ, ಬಸರಕೋಡ-ಬಾದಾಮಿ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಛಿದ್ರಗೊಂಡಿದೆ. ಸುಮಾರು ನೂರಾರು ಮೀಟರ್‍ನಷ್ಟು ರಸ್ತೆ ಕಿತ್ತುಹೋಗಿದೆ. ನಿತ್ಯ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು, ರೈತರು, ಶಾಲಾ-ಕಾಲೇಜ್ ವಿದ್ಯಾರ್ಥಿಗಳು ಇತ್ತ ರಸ್ತೆಯಿಲ್ಲದೆ ಅತ್ತ ವಾಹನ ಸೌಲಭ್ಯವಿಲ್ಲದೆ ಪರದಾಡುವಂತಾಗಿದೆ.
Advertisement
Advertisement
ಈ ರಸ್ತೆಯಲ್ಲಿ ರಾತ್ರಿ ಸಂಚರಿಸುವ ಪ್ರಯಾಣಿಕರು ಬಹಳ ಜಾಗೃತೆಯಿಂದ ಸಂಚರಿಸಬೇಕಿದೆ. ಸ್ವಲ್ಪ ಯಾಮಾರಿದರೂ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಈ ರಸ್ತೆಯಲ್ಲಿ ಟಂಟಂ ವಾಹನ ಬರಲು ಹರಸಾಹಸ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ, ಆದಷ್ಟು ಬೇಗ ರಸ್ತೆ ಸರಿಪಡಿಸಬೇಕೆಂದು ಸ್ಥಳೀಯರು ಮನವಿ ಮಾಡಿದ್ದರು.