ಚಂಡೀಗಢ: ನಾಲ್ಕು ವರ್ಷದ ಬಾಲಕಿಯನ್ನು ಅತ್ಯಾಚಾರಗೈದು ಕೊಲೆ ಮಾಡಿರುವ ಅಮಾನವೀಯ ಘಟನೆಯೊಂದು ಹರಿಯಾಣ ರಾಜ್ಯದ ಫರಿದಾಬಾದ್ ಜಿಲ್ಲೆಯಲ್ಲಿ ನಡೆದಿದೆ.
ರಾಜಧಾನಿ ನವದೆಹಲಿಯಿಂದ ಸುಮಾರು 80 ಕಿ.ಮೀ. ದೂರದಲ್ಲಿರುವ ಫರಿದಾಬಾದ್ ಪಾಲ್ವಾಲ್ನ ಅಸೋತಿ ಗ್ರಾಮದಲ್ಲಿ ಘಟನೆ ಈ ನಡೆದಿದೆ. ಆರೋಪಿ 24 ವರ್ಷದ ಬಾಲು ಅಲಿಯಾಸ್ ವೀರೇಂದ್ರ ಕಳೆದ ಒಂಬತ್ತು ವರ್ಷಗಳಿಂದ ಬಾಲಕಿಯ ತಂದೆಯ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದನು. ಗುರುವಾರ ಮಧ್ಯಾಹ್ನ ವೀರೇಂದ್ರ ಅಂಗಡಿಯಲ್ಲಿ ಕುಳಿತಿದ್ದ ಬಾಲಕಿಯನ್ನು ಕರೆದುಕೊಂಡು ಹೋಗಿ ಅತ್ಯಾಚಾರ ಎಸೆಗಿ ಕೊಲೆ ಮಾಡಿದ್ದಾನೆ.
ಬಾಲಕಿಯನ್ನು ಕೊಂದು ಅಂಗಡಿ ಸೇರಿಕೊಂಡ ಆರೋಪಿ ವೀರೇಂದ್ರ ತನಗೆ ಏನು ಗೊತ್ತಿಲ್ಲವೆಂಬಂತೆ ಇದ್ದನು. ಸಂಜೆ ವೇಳೆ ಬಾಲಕಿ ಕಾಣದಿದ್ದಾಗ ಪೋಷಕರ ಜೊತೆಯಲ್ಲಿಯೇ ವೀರೇಂದ್ರ ಆಕೆಯನ್ನು ಹುಡುಕಿದಂತೆ ನಟಿಸಿದ್ದನು. ಆದ್ರೆ ನೆರೆಯ ವ್ಯಕ್ತಿಯೊಬ್ಬರು ಕೊನೆಯ ಬಾರಿ ಬಾಲಕಿ ವೀರೇಂದ್ರ ಜೊತೆ ಹೋಗಿರೋದನ್ನು ಗಮನಿಸಿ ಪೋಷಕರಿಗೆ ವಿಷಯ ತಿಳಿಸಿದ್ದರು.
ವಿಷಯ ತಿಳಿದು ಆರೋಪಿ ವೀರೇಂದ್ರನ ಮನೆಯನ್ನು ಪರಿಶೀಲಿಸಿದಾಗ ಬಾಲಕಿಯ ಶವ ಡ್ರಮ್ ನಲ್ಲಿ ಪತ್ತೆಯಾಗಿದೆ. ನಾವು ಮಗಳನ್ನು ಹುಡುಕಲು ಆರಂಭಿಸಿದಾಗ ನಮ್ಮ ಜೊತೆ ಬಂದು ಹುಡುಕಿದಂತೆ ನಾಟಕ ಮಾಡಿದ್ದನು. ನಾವು ಮನೆಯ ಬಾಗಿಲನ್ನು ತೆಗೆಯುವಂತೆ ಹೇಳಿದ್ರೂ ಆತ ಬಹಳ ಸಮಯದವರೆಗೆ ತೆಗೆದಿರಲಿಲ್ಲ ಎಂದು ಬಾಲಕಿಯ ತಂದೆ ಹೇಳಿದ್ದಾರೆ.
ಆರೋಪಿಯನ್ನು ಮರಣದಂಡನೆಗೆ ಗುರಿಪಡಿಸಬೇಕು. ಆತ ನನ್ನ ಮುದ್ದು ಮಗಳೊಂದಿಗೆ ಕ್ರೂರವಾಗಿ ವರ್ತಿಸಿದ್ದಾನೆ. ನಾವು ನಮ್ಮ ಮಗಳನ್ನು ಕಳೆದುಕೊಂಡಿದ್ದೇವೆ, ನಮಗೆ ನ್ಯಾಯ ಒದಗಿಸಿಕೊಡಬೇಕೆಂದು ಬಾಲಕಿಯ ತಾಯಿ ಮನವಿ ಮಾಡಿಕೊಂಡಿದ್ದಾರೆ.
ಆರೋಪಿಯ ವಿರುದ್ಧ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಿದ್ದೇವೆ. ನಂತರ ಮೂರು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಸಿಸಿಟಿವಿ ತುಣುಕಗಳನ್ನು, ರಕ್ತದ ಕಲೆಗಳನ್ನು ಮತ್ತು ಪ್ರತ್ಯಕ್ಷದರ್ಶಿ ಹೇಳಿಕೆಗಳನ್ನು ಸಂಗ್ರಹಿಸಿ ತನಿಖೆ ಮಾಡುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿ ದೇವೇಂದರ್ ಸಿಂಗ್ ಹೇಳಿದರು.