ಮಂಡ್ಯ: ನಾಲ್ಕು ವರ್ಷದ ಚಿಕ್ಕ ಬಾಲಕಿಯ ಸಮಯಪ್ರಜ್ಞೆಯಿಂದ ಆಕೆಯ ಪುಟಾಣಿ ಗೆಳತಿಯ ಜೀವ ಉಳಿಸಿದ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಜಿಲ್ಲೆಯ ಮದ್ದೂರು ತಾಲೂಕಿನ ಅಣ್ಣೂರು ಗ್ರಾಮದ ನಾಲ್ಕು ವರ್ಷದ ಚಂದನಾ ಮತ್ತು ರಿತು ಇಬ್ಬರೂ ಎದುರು ಬದುರು ಮನೆಯವರು. ಜೊತೆಗೆ ಇಬ್ಬರೂ ಕೂಡ ಆತ್ಮೀಯ ಗೆಳತಿಯರು. ನವೆಂಬರ್ 10 ರಂದು ಅಜಿತ್ ಕುಮಾರ್ ಮತ್ತು ಶಿಲ್ಪಾ ದಂಪತಿ ಪುತ್ರಿ ಚಂದನಾ ಅಂಗಡಿಯಿಂದ ತಿಂಡಿ ತೆಗೆದುಕೊಂಡು ಬರುತ್ತಿದ್ದಳು. ಈ ವೇಳೆ ತನ್ನ ಗೆಳತಿ ಚಂದ್ರಶೇಖರ್ ಮತ್ತು ವಿನುತಾ ಅವರ ಮಗಳಾದ ರಿತು ತನ್ನ ಚಪ್ಪಲಿಗೆ ಮೆತ್ತಿಕೊಂಡಿರುವ ಸಗಣಿ ತೊಳೆಯಲು ಚಿಕ್ಕ ಕಟ್ಟೆಗೆ ಹೋಗುತ್ತಿರುವುದನ್ನು ನೋಡಿದ್ದಳು. ಚಂದನಾ ಕೂಡ ರಿತುವನ್ನು ಮಾತನಾಡಿಸಲು ಕಟ್ಟೆ ಬಳಿ ಹೋಗಿದ್ದಳು.
Advertisement
ಆದರೆ ಅಷ್ಟರಲ್ಲಿ ಕಾಲು ಜಾರಿ ರಿತು ಕಟ್ಟೆಯೊಳಗೆ ಬಿದ್ದಿದ್ದಾಳೆ. ಇದನ್ನು ನೋಡಿ ಚಂದನಾ ಮನೆಯ ಬಳಿ ತೆರಳಿ ರಿತುವಿನ ಪೋಷಕರು ಮತ್ತು ತನ್ನ ತಂದೆಗೆ ವಿಷಯ ತಿಳಿಸಿ ಅಳಲಾರಂಭಿಸಿದ್ದಾಳೆ. ಆರಂಭದಲ್ಲಿ ಮನೆಯವರು ಚಿಕ್ಕ ಹುಡುಗಿ ಏನೇನೋ ಹೇಳುತ್ತಿದ್ದಾಳೆ ಅಂದುಕೊಂಡಿದ್ದರು. ಇದನ್ನು ನೋಡಿ ಚಂದನಾ ಅಳುವನ್ನು ಜೋರು ಮಾಡಿದ್ದಳು. ಇದರಿಂದ ಗಾಬರಿಗೊಂಡ ಪೋಷಕರು ಕಟ್ಟೆ ಬಳಿ ಓಡಿ ಬಂದು ನೋಡಿದಾಗ ರಿತು ನೀರಿಗೆ ಬಿದ್ದಿರುವುದು ಕಂಡಿದೆ. ತಕ್ಷಣ ರಿತುವನ್ನು ನೀರಿನಿಂದ ಮೇಲೆತ್ತಿದ್ದು, ಆಕೆ ತೀವ್ರ ಅಸ್ವಸ್ಥಳಾಗಿದ್ದಳು.
Advertisement
ಕೂಡಲೇ ರಿತುವನ್ನು ಕೆಎಂದೊಡ್ಡಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎರಡು ದಿನಗಳ ಕಾಲ ಚಿಕಿತ್ಸೆ ಕೊಡಿಸಿ ಮನೆಗೆ ಕರೆತರಲಾಗಿದೆ. ಒಟ್ಟಾರೆ ಪುಟಾಣಿ ಹುಡುಗಿ ಚಂದನಾಳ ಸಮಯಪ್ರಜ್ಞೆಯಿಂದ ಆಕೆಯ ಗೆಳತಿ ರಿತು ಬದುಕುಳಿದಿದ್ದು, ಎಲ್ಲರೂ ಚಂದನಾಳ ಗುಣಗಾನ ಮಾಡುತ್ತಿದ್ದಾರೆ.