ಚಿಕ್ಕಬಳ್ಳಾಪುರ: ನೀರಿನ ಮೇಲೆ ತೇಲಾಡೋಕೆ ಸಾಧ್ಯ ಅನ್ನೋದಾದರೂ ಅದೊಂದು ಕಠಿಣ ಅಭ್ಯಾಸ, ನಿರಂತರ ಪರಿಶ್ರಮದಿಂದಷ್ಟೇ ಅದು ಸಾಧ್ಯ. ಆದರೆ ಸತತ ಯೋಗಭ್ಯಾಸದ ಮೂಲಕ ಕೇವಲ 4 ವರ್ಷದ 8 ತಿಂಗಳ ಪುಟಾಣಿ ಪೋರಿಯೊಬ್ಬಳು ಕೇವಲ 30 ದಿನದಲ್ಲೇ, ನೀರಿನ ಮೇಲೆ ನಿರಾಯಾಸವಾಗಿ ತೇಲಾಡುವ ಮೂಲಕ ಎಲ್ಲರನ್ನ ಹುಬ್ಬೇರಿಸುವಂತೆ ಮಾಡಿದ್ದಾಳೆ.
ಪುಟಾಣಿಯ ಹೆಸರು ಅದಿತಿ. ವಯಸ್ಸು ಕೇವಲ 4 ವರ್ಷದ 8 ತಿಂಗಳು. ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ರಾಮು-ಅನುಷಾ ದಂಪತಿಯ ಮಗಳು. ತಂದೆ ರಾಮು ಕಂಪೆನಿಯೊಂದರಲ್ಲಿ ಎಚ್.ಆರ್. ಆಗಿದ್ದು, ತಾಯಿ ಅನುಷಾ ಬ್ಯಾಂಕ್ ಎಂಪ್ಲಾಯ್ ಆಗಿ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಆದರೆ ಬೇಸಿಗೆ ರಜೆಗೆ ಅಂತ ಅಜ್ಜಿ ಮನೆಗೆ ಬಂದಿದ್ದ ಈ ಅದಿತಿ ಕೇವಲ ಒಂದೇ ತಿಂಗಳಲ್ಲಿ ಈಜುವ ಕಲೆಯನ್ನ ಕರಗತ ಮಾಡಿಕೊಂಡಿದ್ದಾಳೆ.
ಚಿಂತಾಮಣಿ ನಗರದ ಯೋಗ ಗುರು ಗೋವಿಂದ್ ಬಳಿ ಕೇವಲ ಒಂದೇ ತಿಂಗಳಲ್ಲಿ ಕಠಿಣ ಪರಿಶ್ರಮದಿಂದ ಈಜುವ ಕಲೆಯನ್ನು ಕಲಿತ್ತಿದ್ದಾಳೆ. ಜೊತೆಗೆ ಯೋಗಾಭ್ಯಾಸದ ಮೂಲಕ ಕಠಿಣವಾದ ನೀರಿನ ಮೇಲೆ ತೇಲಾಡುವ ಶವಾಸಾನ ಭಂಗಿಯನ್ನ ಕಲಿತು ಎಲ್ಲರನ್ನ ಹುಬ್ಬೇರಿಸುವಂತೆ ಮಾಡಿದ್ದಾಳೆ. ಸುಮಾರು 30 ಅಡಿ ಆಳದ ಬೃಹಾದಾಕರಾದ ಬಾವಿಯಲ್ಲಿ ಯಾವುದೇ ಆಳಕು ಅಂಜಿಕೆಯಿಲ್ಲದೆ, ಒಂದು ಚೂರು ಅಲುಗಾಡದೆ, ಕದಲದೆ ನೀರಿನ ಮೇಲೆ ತೇಲಾಡುತ್ತಾಳೆ. ಮತ್ತೊಂದೆಡೆ ಬಾವಿಯ ಶೆಡ್ ನ ಮೇಲಿಂದ ಡೈ ಹೊಡಿತಾಳೆ.
ಎಲ್ಲ ಮಕ್ಕಳಿಗಿಂತ ಬಹುಬೇಗ ಈಜು ಕಲಿತ ಅದಿತಿ, ಬ್ಯಾಕ್ ಸ್ವಿಮ್ಮಿಂಗ್, ಪ್ಲೋಟಿಂಗ್, ಹೈಟ್ ಜಂಪಿಂಗ್ ಸೇರಿದಂತೆ ಈಜಿನಲ್ಲಿ ನಾನಾ ಭಂಗಿಗಳನ್ನ ಪ್ರದರ್ಶಿಸುವ ಮೂಲಕ ಗಮನ ಸೆಳೆಯುತ್ತಿದ್ದಾಳೆ. ಹೀಗಾಗಿ ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಯ ತೇಲಾಡುವ ಮೂಲಕ ಅದಿತಿ ಲಿಮ್ಕಾ ಸಾಧನೆ ಮಾಡಲಿದ್ದಾಳೆ ಎಂದು ಈಜು-ಯೋಗ ಗುರು ಗೋವಿಂದ್ ಹೇಳಿದ್ದಾರೆ.