– ತಡೆಗೋಡೆ ಇಲ್ಲದ್ದಕ್ಕೆ ಹಳ್ಳಕ್ಕೆ ಬಿದ್ದಿದ್ದ ಮಗು
ಕೊಪ್ಪಳ: ಜಿಲ್ಲೆಯ ಗಂಗಾವತಿ (Gangavathi) ನಗರದ ಗೌಸಿಯಾ ಕಾಲೋನಿಯ ಸಮೀಪದ ದುರ್ಗಮ್ಮನ ಹಳ್ಳದಲ್ಲಿ ಮಗು ಬಿದ್ದು ಕಾಣೆಯಾಗಿತ್ತು. ಈ ಹಿನ್ನೆಲೆ ಮಂಗಳವಾರ (ಸೆ.30) ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ (Shivaraj Tangadagi) ಪೋಷಕರನ್ನ ಭೇಟಿ ಮಾಡಿ, ಸಾಂತ್ವನ ಹೇಳಿದರು.
ಬಳಿಕ ಮಾತನಾಡಿದ ಅವರು, ದುರ್ಗಮ್ಮನ ಹಳ್ಳಕ್ಕೆ ಭದ್ರತೆಯ ದೃಷ್ಠಿಯಿಂದ ತಡೆಗೋಡೆಯನ್ನು ನಿರ್ಮಾಣ ಮಾಡಿ, ಕಬ್ಬಿಣ ತಂತಿಗಳನ್ನು ಸಹ ಹಾಕಲಾಗಿತ್ತು. ಆದರೆ ಗೌಸಿಯಾ ಕಾಲೋನಿಯಲ್ಲಿ ಸ್ಥಳೀಯರು ಒತ್ತಾಯದಿಂದ ಕಬ್ಬಿಣದ ತಂತಿಯನ್ನು ಸ್ವಲ್ಪ ತೆಗೆಯಲಾಗಿತ್ತು. ಆ ಜಾಗದಲ್ಲಿಯೇ ಮಗು ಬಿದ್ದಿರುವುದು ವಿಷಾದನೀಯ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಯಾರ ಬಳಿ ಆಯುಧ ಇಲ್ಲವೋ ಅವರೆಲ್ಲಾ ಆಯುಧ ಖರೀದಿಸಿ ಪೂಜಿಸಿ: ನಾರಾಯಣ ಭಾಂಡಗೆ
ಮಗು ಹಳ್ಳದಲ್ಲಿ ಬಿದ್ದು, ಈಗಾಗಲೇ ನಾಲ್ಕು ದಿನಗಳು ಕಳೆದರೂ ಮಗುವಿನ ದೇಹ ಪತ್ತೆಯಾಗಿಲ್ಲ. ನಗರಸಭೆ ಹಾಗೂ ತಾಲೂಕು ಆಡಳಿತದವರು ನಿರಂತರ ಕಾರ್ಯಚರಣೆಯನ್ನು ನಡೆಸುತ್ತಿದ್ದು, ಹುಡುಕಾಟ ನಡೆಸಲು ಜಿಂದಾಲ್ ನಿಂದ ಪರಿಣಿತರ ತಂಡ ಕೂಡ ಆಗಮಿಸಿದೆ. ಆದರೂ ಮಗು ಪತ್ತೆಯಾಗಿಲ್ಲ. ಆದಷ್ಟು ಬೇಗನೇ ಮಗುವನ್ನು ಪತ್ತೆ ಹಚ್ಚಲಾಗುವುದು. ಇನ್ನೂ ಮಗು ಕಳೆದುಕೊಂಡಿರುವ ಕುಟುಂಬಸ್ಥರಿಗೆ ಸೂಕ್ತ ರೀತಿಯಲ್ಲಿ ಪರಿಹಾರವನ್ನು ಕೊಡಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ, ಆಪರ ಜಿಲ್ಲಾಧಿಕಾರಿ ಸಿದ್ದರಾಮೇಶ, ತಹಸೀಲ್ದಾರ ಯು.ನಾಗರಾಜ, ನಗರಸಭೆ ಪೌರಾಯುಕ್ತ ವಿರುಪಾಕ್ಷಮೂರ್ತಿ ಹಾಗೂ ಇತರರಿದ್ದರು.
 


 
		 
		 
		 
		 
		
 
		 
		 
		 
		