ಮಂಗಳೂರು: 60 ಕಿ.ಮೀ ಅಂತರದಲ್ಲಿ ಒಂದಕ್ಕಿಂತ ಹೆಚ್ಚು ಟೋಲ್ ಇರಬಾರದು ಎಂಬುದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮ. ಆದ್ರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 48 ಕಿ.ಮೀ ಅಂತರದಲ್ಲಿ 4 ಟೋಲ್‍ಗೇಟ್‍ಗಳಿದ್ದು, ಅದರಲ್ಲೂ ಸುರತ್ಕಲ್ ಟೋಲ್‍ಗೇಟ್ ಅಕ್ರಮ ಎಂಬುದು ಟೋಲ್ ವಿರೋಧಿ ಹೋರಾಟಗಾರರ ಆರೋಪವಾಗಿದೆ.
ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್‍ನ ಎನ್.ಐ.ಟಿ.ಕೆ ಬಳಿ ಕಾರ್ಯಾಚರಿಸುತ್ತಿರುವ ಟೋಲ್‍ಗೇಟ್, ಉಡುಪಿ ಜಿಲ್ಲೆಯ ಹೆಜಮಾಡಿ ಟೋಲ್‍ಗೇಟ್ ಆರಂಭವಾದ ಬಳಿಕ ಮುಚ್ಚುವ ಒಪ್ಪಂದದೊಂದಿಗೆ 6 ವರ್ಷದ ಹಿಂದೆ ತಾತ್ಕಾಲಿಕ ನೆಲೆಯಲ್ಲಿ ಆರಂಭಗೊಂಡಿತ್ತು. ಇದನ್ನೂ ಓದಿ: ಅಗ್ನಿಪಥ್ ಸತ್ಯಾಗ್ರಹದಲ್ಲಿ ಮೈಕ್ ಭಾಷಣಕ್ಕೆ ಬ್ರೇಕ್ ಹಾಕಿದ ಪೊಲೀಸರು
ಆದರೆ ತಾತ್ಕಾಲಿಕ ನೆಲೆಯಲ್ಲಿ ಆರಂಭವಾದ ಟೋಲ್‍ಗೇಟ್ ಕೂಡಾ ಕಾರ್ಯಾಚರಿಸುತ್ತಿರುವುದು ಸುರತ್ಕಲ್ ಟೋಲ್ ವಿರೋಧಿ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಹುಸಿ ಭರವಸೆ ನೀಡಿದ ಸಂಸದರು ಸೇರಿದಂತೆ ಶಾಸಕರು ರಾಜೀನಾಮೆ ನೀಡುವಂತೆ ಹೋರಾಟಗಾರರನ್ನು ಒತ್ತಾಯಿಸಿದ್ದಾರೆ.
ಕೇಂದ್ರದ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು 60 ಕಿ.ಮೀ ಒಳಗಿನ ಎಲ್ಲ ಟೋಲ್‍ಗೇಟ್‍ಗಳನ್ನು 90 ದಿನಗಳೊಳಗೆ ತೆರವುಗೊಳಿಸುವುದಾಗಿ ಲೋಕಸಭೆಯಲ್ಲಿ ಹೇಳಿದ್ದರು. ಭಾರತದಲ್ಲಿ ಈ ರೀತಿ 187 ಟೋಲ್ ಬೂತ್‍ಗಳಿದ್ದು, ಕರ್ನಾಟಕದಲ್ಲಿ 28 ಟೋಲ್‍ಗೇಟ್‍ಗಳಿವೆ.
ಈ ಹಿನ್ನೆಲೆ ಸಂಸದರು, ಶಾಸಕರು ಸುರತ್ಕಲ್ ಟೋಲ್‍ಗೇಟ್ ತೆರವು ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಈ ಭರವಸೆಯ ಗಡುವು ಜೂನ್ 22ಕ್ಕೆ ಮುಕ್ತಾಯಗೊಂಡಿದ್ದು, ಟೋಲ್ ತೆರವಿಗೆ ಯಾವುದೇ ಕ್ರಮವಾಗಿಲ್ಲ. ಬದಲಿಗೆ ಟೋಲ್ ಸಂಗ್ರಹ ಗುತ್ತಿಗೆ ನವೀಕರಣ ಪ್ರಕ್ರಿಯೆ ನಡೆಯುತ್ತಿದೆ. ಹೀಗಾಗಿ ಅಕ್ರಮವಾಗಿ ನಡೆಯುತ್ತಿರುವ ಟೋಲ್ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಇರೋದು ಮೂರಾಬಟ್ಟೆ ಸರ್ಕಾರ: ಕಾರಜೋಳ
ಟೋಲ್‍ಗೇಟ್‍ಗಳನ್ನು ರದ್ದು ಮಾಡುವ ಭರವಸೆಯನ್ನು ಜನಪ್ರತಿನಿಧಿಗಳು ನೀಡುತ್ತಲೇ ಬಂದಿದ್ದಾರೆ. ಆದ್ರೆ ಈ ಭರವಸೆಗಳು ಕಾರ್ಯರೂಪಕ್ಕೆ ಬಂದೇ ಇಲ್ಲ. ಹೀಗಾಗಿ ಇನ್ಮುಂದೆಯಾದ್ರು ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ತಾವು ನೀಡಿದ ಹೇಳಿಕೆಗಳಿಗೆ ಬದ್ಧರಾಗಿರುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.