– ಗಾಯಗೊಂಡ ಮೀನುಗಾರರನ್ನು 6 ಗಂಟೆ ವಿಚಾರಣೆ ನಡೆಸಿದ ಲಂಕಾ ಸೇನೆ
ಚೆನ್ನೈ: ಶ್ರೀಲಂಕಾ ನೌಕಾಪಡೆಯ (Sri Lanka Navy) ಹಡಗು ತಮಿಳುನಾಡಿನ (Tamil Nadu) ಮೀನುಗಾರರ ದೋಣಿಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮೀನುಗಾರರು ಗಾಯಗೊಂಡಿದ್ದಾರೆ.
ಗಾಯಗೊಂಡ ಮೀನುಗಾರರನ್ನು ಶಕ್ತಿವೇಲ್, ದೇವರಾಜ್, ಕಾರ್ತಿಕೇಯನ್ ಮತ್ತು ಸತೀಶ್ ಎಂದು ಗುರುತಿಸಲಾಗಿದೆ. ಅವರನ್ನು ನಾಗಪಟ್ಟಣಂ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾಲ್ವರು ಮೀನುಗಾರರು ಎರಡು ದಿನಗಳ ಹಿಂದೆ ಸಮುದ್ರಕ್ಕೆ ಇಳಿದಿದ್ದರು. ಮಂಗಳವಾರ ರಾತ್ರಿ ಅವರು ಮೀನುಗಾರಿಕೆ ನಡೆಸುತ್ತಿದ್ದಾಗ ದೋಣಿಗೆ ಶ್ರೀಲಂಕಾ ನೌಕಾಪಡೆಯ ನೌಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಅದು ಮಗುಚಿ ಬಿದ್ದಿದೆ ಎಂದು ಗಾಯಗೊಂಡ ಮೀನುಗಾರರು ಪೊಲೀಸರಿಗೆ ತಿಳಿಸಿದ್ದಾರೆ.
ಈ ವೇಳೆ ಅವರು ಗಾಯಗೊಂಡಿದ್ದರೂ ಸಹ, ಶ್ರೀಲಂಕಾ ನೌಕಾಪಡೆಯ ಅಧಿಕಾರಿಗಳು ಅವರನ್ನು ಸುಮಾರು 6 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದ್ದರು. ಬಳಿಕ ಶ್ರೀಲಂಕಾ ನೌಕಾಪಡೆ ಗಾಯಗೊಂಡ ಮೀನುಗಾರರನ್ನು ಸ್ಥಳಕ್ಕೆ ಆಗಮಿಸಿದ ತಮಿಳುನಾಡಿನ ಇತರ ಮೀನುಗಾರರಿಗೆ ಹಸ್ತಾಂತರಿಸಿದೆ. ಬಳಿಕ ಸಮುದ್ರದ ಮಧ್ಯದಲ್ಲಿ ಮುಳುಗಿದ ದೋಣಿಯನ್ನು ಹೊರತೆಗೆದು ಇತರರ ಸಹಾಯದಿಂದ ಮೀನುಗಾರರನ್ನು ದಡಕ್ಕೆ ಕರೆತರಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂತ್ರಸ್ತ ಮೀನುಗಾರರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದು, ಅದರ ಆಧಾರದ ಮೇಲೆ ವಿಚಾರಣೆ ನಡೆಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.