ತಿರುವನಂತಪುರಂ: ಕೆರಳದ (Kerala) ಕೊಚ್ಚಿನ್ ವಿಶ್ವವಿದ್ಯಾನಿಲಯದ (Cochin University) ಕಾರ್ಯಕ್ರಮ ಒಂದರಲ್ಲಿ ನಾಲ್ವರು ವಿದ್ಯಾರ್ಥಿಗಳು (Student) ಕಾಲ್ತುಳಿತಕ್ಕೆ ಸಿಕ್ಕಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಕನಿಷ್ಠ 55 ಮಂದಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ಟೆಕ್ ಫೆಸ್ಟ್ ನಡೆಯುತ್ತಿದ್ದ ವೇಳೆ, ಗಾಯಕಿ ನಿಖಿತಾ ಗಾಂಧಿ ಕ್ಯಾಂಪಸ್‍ನಲ್ಲಿರುವ ಓಪನ್ ಏರ್ ಆಡಿಟೋರಿಯಂನಲ್ಲಿ ಕಾರ್ಯಕ್ರಮ ನೀಡುತ್ತಿದ್ದರು. ಪಾಸ್‍ಗಳನ್ನು ಹೊಂದಿರದವರಿಗೆ ಕಾರ್ಯಕ್ರಮಕ್ಕೆ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಹೀಗಾಗಿ ವಿದ್ಯಾರ್ಥಿಗಳೆಲ್ಲ ಹೊರಗಡೆ ನಿಂತು ಕಾರ್ಯಕ್ರಮ ವೀಕ್ಷಿಸುತ್ತಿದ್ದರು. ಇದನ್ನೂ ಓದಿ: ಪ್ರಧಾನಿ ಮೋದಿಗೆ ಪ್ರತಿಭಟನಾಕಾರರ ದಿಗ್ಬಂಧನ- ಅಧಿಕಾರಿಯ ಅಮಾನತು
ಇದೇ ವೇಳೆ ಜೋರಾಗಿ ಮಳೆ ಪ್ರಾರಂಭವಾಗಿದೆ. ಹೀಗಾಗಿ ಮಳೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಏಕಾಏಕಿ ವಿದ್ಯಾರ್ಥಿಗಳು ಆಡಿಟೋರಿಯಂಗೆ ನುಗ್ಗಿದ್ದಾರೆ. ಪರಿಣಾಮ ಕಾಲ್ತುಳಿತ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಘಟನೆಯಲ್ಲಿ ಕನಿಷ್ಠ 55 ವಿದ್ಯಾರ್ಥಿಗಳು ಗಾಯಗೊಂಡಿದ್ದು, ಅವರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಮೃತ ವಿದ್ಯಾರ್ಥಿಗಳ ಗುರುತು ಇನ್ನೂ ಬಹಿರಂಗವಾಗಿಲ್ಲ. ಮೃತರಲ್ಲಿ ಇಬ್ಬರು ವಿದ್ಯಾರ್ಥಿಗಳು ಹಾಗೂ ಇಬ್ಬರು ವಿದ್ಯಾರ್ಥಿನಿಯರು ಸೇರಿದ್ದಾರೆ ಎಂದು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತುರ್ತು ಸಭೆ ಕರೆದು ಅಗತ್ಯ ಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಇದನ್ನೂ ಓದಿ: ದೇಶೀಯ ವಿಮಾನ ಪ್ರಯಾಣಿಕರ ಸಂಖ್ಯೆಯಲ್ಲಿ ಹೊಸ ದಾಖಲೆ