ಮೈಸೂರು: ಹೊಸ ವರ್ಷ ಆಚರಣೆಗೆಂದು ಬೆಂಗಳೂರಿನಿಂದ ಮಡಿಕೇರಿಗೆ ತೆರಳುತ್ತಿದ್ದ ಯುವಕರನ್ನು ದೋಚಿದ್ದ ನಾಲ್ವರು ದರೋಡೆಕೋರರನ್ನು ಪ್ರಕರಣ ನಡೆದ 24 ಗಂಟೆಯೊಳಗೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ರಾಘವೇಂದ್ರ, ನಿಖಿಲ್, ಕೀರ್ತಿ ಹಾಗೂ ಅಭಿಷೇಕ್ ಎಂದು ಗುರುತಿಸಲಾಗಿದೆ. ಹುಣಸೂರು ಪೊಲೀಸರು ಕಾರ್ಯಾಚರಣೆ ನಡೆಸಿ ಈ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಾಲ್ವರು ದರೋಡೆಕೋರರನ್ನು ಬಂಧಿಸಿ, ಅವರಿಂದ 20 ಗ್ರಾಂ ಚಿನ್ನ, 5,800 ರೂ. ನಗದು ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಹೊಸ ವರ್ಷ ಆಚರಣೆಗೆಂದು ಬೆಂಗಳೂರಿನಿಂದ ಮಡಿಕೇರಿಗೆ ತೆರಳುತ್ತಿದ್ದ ಯುವಕರನ್ನು ಆರೋಪಿಗಳು ಟಾರ್ಗೆಟ್ ಮಾಡಿ, ಹೋಟೆಲ್ ತೋರಿಸುವ ನೆಪದಲ್ಲಿ ಅವರನ್ನು ಕರೆದುಕೊಂಡು ಹೋಗಿ 20 ಗ್ರಾಂ ಚಿನ್ನದ ಸರ ಹಾಗೂ 7 ಸಾವಿರ ನಗದು ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಯುವಕರು ಪೊಲೀಸರಿಗೆ ದೂರು ನೀಡಿದ್ದರು.
ಯುವಕರ ದೂರಿನ ಆಧಾರದ ಮೇಲೆ ತನಿಖೆ ಕೈಗೊಂಡ ಪೊಲೀಸರು ಕೇವಲ 24 ಗಂಟೆಯೊಳಗೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.