ತುಮಕೂರು: ಕುಣಿಗಲ್ ತಾಲೂಕಿನ ಗಡಿಭಾಗದಲ್ಲಿನ ಮಾರ್ಕೋನಹಳ್ಳಿ ಜಲಾಶಯದ ಕೋಡಿ ನೀರಿನಲ್ಲಿ ಆಟವಾಡಲು ಹೋದ ನಾಲ್ವರು ಕೊಚ್ಚಿ ಹೋಗಿರುವ ದುರಂತ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.
ಪರ್ವಿನ್‍ತಾಜ್ (23) ಮತ್ತು ಸಾದೀಯ(17) ರಾಜು(23) ಮತ್ತು ಅಪ್ಪು(20) ನೀರಿನಲ್ಲಿ ಕೊಚ್ಚಿಹೋಗಿರುವ ಮೃತದುರ್ದೈವಿಗಳು. ಜಲಾಶಯದ ಕೋಡಿ ನೀರಿನಲ್ಲಿ ಆಟವಾಡಲು ಹೋದ ನಾಲ್ವರು ಕೊಚ್ಚಿ ಹೋಗಿದ್ದಾರೆ.
ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಮಾಕೋರ್ನಹಳ್ಳಿ ಜಲಾಶಯವು ತುಂಬಿರುವ ಹಿನ್ನಲೆಯಲ್ಲಿ ಜಲಾಶಯಕ್ಕೆ ಪ್ರವಾಸಿಗರು ಹೆಚ್ಚಾಗುತ್ತಿದ್ದು, ಭಾನುವಾರ ರಜೆ ಇದ್ದ ಹಿನ್ನೆಯಲ್ಲಿ ಜಲಾಶಯದ ಬಲಭಾಗದ ಕೋಡಿ ಹಳ್ಳದಲ್ಲಿ ಆಟವಾಡುತ್ತಿದ್ದರು. ಆಟವಾಡುತ್ತಾ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ಧಿಡೀರನೇ ಮಾರ್ಕೋನಹಳ್ಳಿ ಜಲಾಶಯಕ್ಕೆ ಎರಡು ಸಾವಿರ ಕ್ಯೂಸೆಕ್ ಒಳ ಹರಿವು ಹೆಚ್ಚಾಗಿ, ಕೋಡಿ ಸೈಪೋನ್‌ನಲ್ಲಿ ನೀರಿನ ಪ್ರಮಾಣ ಹೆಚ್ಚಾದ ಹಿನ್ನಲೆಯಲ್ಲಿ ನಾಲ್ವರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.
ಘಟನೆ ನೋಡಿದ ಸ್ಥಳದಲ್ಲಿದ್ದವರು ಅವರನ್ನು ರಕ್ಷಿಸಲು ಮುಂದಾದರೂ ಯಾವುದೇ ಪ್ರಯೋಜನವಾಗಿಲ್ಲ. ತಮ್ಮ ಕುಟುಂಬದ ಸದಸ್ಯರು ಕಣ್ಣುಮುಂದೆಯೇ ಕೊಚ್ಚಿಹೋಗುತ್ತಿರುವ ದೃಶ್ಯ ಕಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟುವಂತಿದೆ. ಕೊಚ್ಚಿಹೋಗಿರುವ ಮೃತ ದೇಹಗಳ ಹುಡುಕಾಟಕ್ಕಾಗಿ ಅಗ್ನಿಶಾಮಕ ದಳ ಹಾಗೂ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದರು ಶವಗಳು ಇದುವರೆಗೂ ಪತ್ತೆಯಾಗಿಲ್ಲ. ಜಲಾಶಯದ ನೀರಿನ ಹೊರಹರಿವು ಹೆಚ್ಚಿರುವ ಕಾರಣ ಶವಗಳ ಹುಡುಕಾಟ ಕಾರ್ಯ ಕಷ್ಟಕರವಾಗಿದ್ದು ಮೃತದೇಹಗಳ ಹುಡುಕಾಟ ತಲೆನೋವಾಗಿ ಪರಿಣಮಿಸಿದ್ದು ಶಿಂಷಾ ನದಿಯಲ್ಲಿ ಹುಡುಕಾಟ ಕಾರ್ಯ ಮುಂದುವರಿದಿದೆ.