Belgaum
SSLC ಪರೀಕ್ಷೆ ವೇಳೆ ನಕಲಿಗೆ ಸಹಕರಿಸುತ್ತಿದ್ದ ಪ್ರಾಚಾರ್ಯ ಸೇರಿ ನಾಲ್ವರು ಅರೆಸ್ಟ್

ಬೆಳಗಾವಿ: ಎಸ್‍ಎಸ್‍ಎಲ್‍ಸಿ ಗಣಿತ ಪರೀಕ್ಷೆಯಲ್ಲಿ ನಕಲು ಮಾಡಲು ವಿದ್ಯಾರ್ಥಿಗಳಿಗೆ ಸಹಕರಿಸಿದ್ದ ನಾಲ್ವರು ಶಿಕ್ಷಕರನ್ನು ಪೊಲೀಸರು ಬಂಧಿಸಿದ ಘಟನೆ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣ ನಡೆದಿದೆ.
ಹಾರೂಗೇರಿ ವಿದ್ಯಾಲಯದ ಪ್ರಾಚಾರ್ಯ ಎಂ.ಆರ್.ಮಗದುಮ್, ಸಹಶಿಕ್ಷಕರಾದ ಡಿ.ಪಿ.ದೇಸಾಯಿ, ಎ.ಬಿ.ಪಾಟೀಲ, ಅಲಕನೂರು ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಪಿ.ಬಿ.ಪಾಲಯಾ ಬಂಧಿತರು. ಆರೋಪಿಗಳನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಆಗಿದ್ದೇನು?:
ಮವಾರ ಗಣಿತ ಪರೀಕ್ಷೆ ನಡೆದಿತ್ತು. ಹಾರೂಗೇರಿ ವಿದ್ಯಾಲಯದ ಶಿಕ್ಷಕರು ಕೆಲ ವಿದ್ಯಾರ್ಥಿಗಳಿಂದ ಪಶ್ನೆ ಪತ್ರಿಕೆ ಪಡೆದು ಕೊಠಡಿಯಲ್ಲಿ ಕುಳಿತು ಉತ್ತರ ಸಿದ್ಧಪಡಿಸಿದ್ದಾರೆ. ಬಳಿಕ ಪ್ರತಿಯೊಂದು ಪರೀಕ್ಷಾ ಕೊಠಡಿಗಳಿಗೆ ಹೋಗಿ ವಿದ್ಯಾರ್ಥಿಗಳಿಗೆ ಉತ್ತರವನ್ನು ಹೇಳಲು ಮುಂದಾಗಿದ್ದರು. ಕೊಠಡಿಯಲ್ಲಿ ಶಿಕ್ಷಕರು ಪ್ರಶ್ನೆ ಪತ್ರಿಕೆ ಹಿಡಿದು ಉತ್ತರ ಬರೆಯುತ್ತಿದ್ದ ದೃಶ್ಯವನ್ನು ಸ್ಥಳೀಯರೊಬ್ಬರು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದು, ರಾಯಬಾಗ ಬಿಇಒ ಎಚ್.ಎ.ಭಜಂತ್ರಿ ಅವರಿಗೆ ನೀಡಿದ್ದರು.
ವಿಡಿಯೋ ನೋಡಿದ ಬಿಇಒ ಎಚ್.ಎ.ಭಜಂತ್ರಿ ಅವರು ಹಾರೂಗೇರಿ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಾದ ಶಿಕ್ಷಕರನ್ನು ಮಂಗಳವಾರ ಸಂಜೆ 4 ಗಂಟೆಗೆ ಬಂಧಿಸಿದ್ದಾರೆ.
