Connect with us

Latest

ಎನ್‍ಸಿಪಿಯ 3, ಕಾಂಗ್ರೆಸ್ಸಿನ ಓರ್ವ ಶಾಸಕ ರಾಜೀನಾಮೆ – ನಾಳೆ ಬಿಜೆಪಿಗೆ ಸೇರ್ಪಡೆ

Published

on

ಮುಂಬೈ: ರಾಜ್ಯದ ಗಾಳಿ ಮಹಾರಾಷ್ಟ್ರಕ್ಕೂ ಬೀಸಿದ್ದು, ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಮಾಹಾರಾಷ್ಟ್ರದಲ್ಲಿ ಆಪರೇಷನ್ ಕಮಲ ಜೋರಾಗಿ ನಡೆಯುತ್ತಿದೆ.

ಇತ್ತೀಚೆಗಷ್ಟೇ ಎನ್‍ಸಿಪಿ ಮುಂಬೈ ವಿಭಾಗದ ಮುಖ್ಯಸ್ಥರೊಬ್ಬರು ಶಿವಸೇನೆ ಪಕ್ಷಕ್ಕೆ ಸೇರಿದ್ದರು. ಇದೀಗ ಮೂವರು ಎನ್‍ಸಿಪಿ ಶಾಸಕರು ರಾಜೀನಾಮೆ ನೀಡಿದ್ದು, ಬಿಜೆಪಿ ಸೇರುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಎನ್‍ಸಿಪಿ ಶಾಸಕರಾದ ಶಿವೇಂದ್ರಸಿನ್ಹಾರಾಜೆ ಭೋಸ್ಲೆ(ಸತಾರಾ), ವೈಭವ್ ಪಿಚದ್(ಅಕೋಲೆ), ಸಂದೀಪ್ ನಾಯ್ಕ್(ಐರೋಲಿ) ಹಾಗೂ ಕಾಂಗ್ರೆಸ್ ಶಾಸಕ ಕಲಿದಾಸ್ ಕೋಲಂಬ್ಕರ್(ನೈಗಾನ್) ರಾಜೀನಾಮೆಗಳನ್ನು ಪ್ರತ್ಯೇಕವಾಗಿ ಸ್ಪೀಕರ್ ಹರಿಭಾವ್ ಬಗಾಡೆ ಅವರಿಗೆ ಸಲ್ಲಿಸಿದ್ದಾರೆ. ಮೂಲಗಳ ಪ್ರಕಾರ ರಾಜೀನಾಮೆ ನೀಡಿದ ಶಾಸಕರು ಬುಧವಾರ ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆಯಿದೆ.

ನನ್ನ ಕ್ಷೇತ್ರದ ಹಿತಾಸಕ್ತಿ ಕಾಪಾಡಲು ಹೆಚ್ಚು ಆಸಕ್ತಿ ವಹಿಸಿದ್ದು ಹೀಗಾಗಿ ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಎನ್‍ಸಿಪಿ ಸಂಸದ ಉದಯನ್‍ರಾಜೆ ಭೋಸ್ಲೆ ಅವರ ಸಂಬಂಧಿಕ ಶಿವೇಂದ್ರಸಿನ್ಹಾರಾಜೆ ಭೋಸ್ಲೆ ಅವರು ತಿಳಿಸಿದ್ದಾರೆ.

ಮುಂಬೈನಿಂದ ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಕೊಲಂಬ್ಕರ್ ಅವರನ್ನು ಶಿವೇಂದ್ರಸಿನ್ಹಾರಾಜೆ ಭೋಸ್ಲೆ ಅವರು 2014ರ ವಿಧಾನಸಭೆ ಚುನಾವಣೆಯಲ್ಲಿ 47,813 ಮತಗಳ ಅಂತರದಲ್ಲಿ ಸೋಲಿಸಿದ್ದರು. ಹೀಗಾಗಿ ಬಿಜೆಪಿ ಇವರಿಗೆ ಗಾಳ ಹಾಕಿದೆ.

ಎನ್‍ಸಿಪಿಯ ಮಾಜಿ ಸಚಿವ ಮಧುಕರ್ ಪಿಚಾದ್ ಅವರ ಪುತ್ರ, ಅಹ್ಮದ್‍ನಗರ ಜಿಲ್ಲೆಯ ಅಕೋಲೆ ಕ್ಷೇತ್ರದ ವೈಭವ್ ಪಿಚಾದ್ ಅವರ ವಿಧಾನಸಭಾ ಕ್ಷೇತ್ರವು ಕಾಂಗ್ರೆಸ್‍ನ ನೂತನ ರಾಜ್ಯಾಧ್ಯಕ್ಷ ಬಾಳಾಸಾಹೇಬ್ ಥೋರತ್ ಅವರ ಕ್ಷೇತ್ರದ ಪಕ್ಕದಲ್ಲೇ ಇದ್ದು, ಇವರನ್ನು ಅಲ್ಲಿಯ ಅಭ್ಯರ್ಥಿಯನ್ನಾಗಿ ಘೋಷಿಸಿದರೆ ಸುತ್ತಲಿನ ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬಹುದು ಎಂಬ ಲೆಕ್ಕಾಚಾರವನ್ನು ಬಿಜೆಪಿ ಹಾಕಿಕೊಂಡಿದೆ.

ಮಹಾರಾಷ್ಟ್ರದ ಒಟ್ಟು 288 ವಿಧಾನಸಭಾ ಕ್ಷೇತ್ರಗಳ ಪೈಕಿ 220 ಸ್ಥಾನಗಳಲ್ಲಿ ಜಯಗಳಿಸುವ ಪಕ್ಷದ ಉದ್ದೇಶವನ್ನು ಈಡೇರಿಸುವ ನಿಟ್ಟಿನಲ್ಲಿ ಬಿಜೆಪಿ ನಾಯಕರು ಸನ್ನದ್ಧರಾಗುತ್ತಿದ್ದು, ಇದರ ಭಾಗವಾಗಿ ಆಪರೇಷನ್ ಕಮಲಕ್ಕೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚೆಗೆ ಎನ್‍ಸಿಪಿ ಮುಂಬೈ ವಿಭಾಗದ ಮುಖ್ಯಸ್ಥ ಸಚಿನ್ ಅಹಿರ್ ಅವರು ಎನ್‍ಸಿಪಿ ಬಿಟ್ಟು ಶಿವಸೇನೆ ಸೇರಿದ್ದರು. ಅಲ್ಲದೆ, ಮೇ ತಿಂಗಳಲ್ಲಿ ಎನ್‍ಸಿಪಿ ನಾಯಕ ಹಾಗೂ ಮಾಜಿ ಸಚಿವ ಜಯ್‍ದತ್ ಕ್ಷೀರ್‍ಸಾಗರ್ ಅವರು ಸಹ ಶಿವಸೇನೆ ಸೇರಿದ್ದರು.

ಭಾನುವಾರ ಮಾಧ್ಯಮಗಳ ಜೊತೆ ಮಾತನಾಡಿದ್ದ ಮಹಾರಾಷ್ಟ್ರ ಜಲಸಂಪನ್ಮೂಲ ಸಚಿವ ಗಿರೀಶ್, ಕಾಂಗ್ರೆಸ್ ಮತ್ತು ಎನ್‍ಸಿಪಿ 50 ಮಂದಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದು, ಪಕ್ಷ ಬದಲಾಯಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದರು.

Click to comment

Leave a Reply

Your email address will not be published. Required fields are marked *

www.publictv.in