– ದೇಶಾದ್ಯಂತ ಸುದ್ದಿಯಾಗಿತ್ತು 5 ಮಕ್ಕಳ ಜನನ
– ಪತಿ ಆತ್ಮಹತ್ಯೆ ಮಾಡಿದ್ರೂ ಕಷ್ಟದಿಂದ ಮಕ್ಕಳನ್ನು ಬೆಳೆಸಿದ ತಾಯಿ
ತಿರುವನಂತಪುರ: ದೇವರ ನಾಡಿನಲ್ಲಿ 1995ನೇ ಇಸವಿಯಲ್ಲಿ ಅವರ ಹುಟ್ಟು ಭಾರೀ ಸದ್ದು ಮಾಡಿತ್ತು. ಹೌದು. ಒಂದೇ ಬಾರಿಗೆ ಐವರು ಮಕ್ಕಳ ಜನನವಾಗಿತ್ತು. ಆ ಬಳಿಕ ಅವರು ಶಾಲೆ, ಕಾಲೇಜು, ಮತದಾನ ಹೀಗೆ ತಮ್ಮ ಎಲ್ಲ ಮೊದಲುಗಳನ್ನು ಒಟ್ಟಿಗೆ ಮಾಡುವ ಮೂಲಕ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದರು.
ಹೀಗೆ ತಮ್ಮೆಲ್ಲ ಮೊದಲುಗಳನ್ನು ಒಟ್ಟಿಗೆ ಮುಗಿಸಿ ಈ ಐವರಲ್ಲಿ ನಾಲ್ವರು ತಮ್ಮ ಜೀವನದ ಎರಡನೇ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಮುಂದಿನ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಗುರುವಾಯೂರಿನ ಶ್ರೀಕೃಷ್ಣ ದೇವಾಲಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇತ್ತ ತಮ್ಮೊಟ್ಟಿಗೆ ಜನಿಸಿದ್ದ ಸಹೋದರ ಮಾತ್ರ ಸಹೋದರಿಯರ ಮದ್ವೆ ಸಿದ್ಧತೆಯಲ್ಲಿ ಬ್ಯುಸಿಯಾಗಿದ್ದಾರೆ.
Advertisement
Advertisement
1995ರ ನವೆಂಬರ್ 18ರಂದು ನಾಲ್ವರು ಹೆಣ್ಣು ಹಾಗೂ ಓರ್ವ ಮಗನ ಜನನವಾದ ಸಮಯದಲ್ಲಿ ತಂದೆ ಒಂದು ಸಣ್ಣ ವ್ಯಾಪಾರಿಯಾಗಿದ್ದರು. ಆದರೆ ಈ ಐವರು ಒಂದೇ ಬಾರಿ ಜನಿಸಿದ್ದರಿಂದ ಸಹಜವಾಗಿಯೇ ತಂದೆ ಅಚ್ಚರಿಗೊಳಗಾಗಿದ್ದರು. ಅಲ್ಲದೆ ಐವರಿಗೂ ಒಂದೇ ರೀತಿ ಹೆಸರು ಬರುವಂತೆ ಇಡಲಾಯಿತು. ಉತ್ರಜ, ಉತ್ತರ, ಉತ್ತಮ, ಉತ್ರ ಹಾಗೂ ಉತ್ರಜನ್ ಎಂಬುದಾಗಿ ಇವರುಗಳಿಗೆ ನಾಮಕರಣ ಮಾಡಲಾಯಿತು. ಯಾಕಂದ್ರೆ ಇವರೆಲ್ಲರೂ ಮಲಯಾಳಂ ಕ್ಯಾಲೆಂಡರ್ ಪ್ರಕಾರ ಉತ್ರಮ್(ಉತ್ತರ) ನಕ್ಷತ್ರದಲ್ಲಿ ಹುಟ್ಟಿದವರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇವರೆಲ್ಲರಿಗೂ ‘ಉ’ನಿಂದ ಪ್ರಾರಂಭವಾಗುವ ಅಕ್ಷರದಿಂದ ಹೆಸರಿಡಲಾಯಿತು.
Advertisement
ಐವರು ಮಕ್ಕಳ ಆಗಮನವಾಗುತ್ತಿದ್ದಂತೆಯೇ ತಮ್ಮ ಮನೆಯ ಹೆಸರು ಬದಲಾಯಿಸಿ `ಪಂಚರತ್ನಮ್'(ಐದು ರತ್ನ) ಎಂದು ಮರು ಹೆಸರಿಡಲಾಯಿತು. ಬೆಳೆಯುತ್ತಾ ಮಕ್ಕಳು ಬೇರೆ ಬೇರೆ ಕ್ಷೇತ್ರಗಳಲ್ಲಿ ಹೆಸರು ಮಾಡಿದರು. ಆದರೆ ಇದು ಅವರಿಗೆ ಅಷ್ಟೊಂದು ಸುಲಭವಾಗಿರಲಿಲ್ಲ. ಈ ಐವರಿಗೂ ಒಂದೇ ತರನಾದ ಬಟ್ಟೆ, ಬ್ಯಾಗ್, ಕೊಡೆಗಳನ್ನು ನೀಡಲು ತಂದೆ ತುಂಬಾನೇ ಕಷ್ಟ ಪಡುತ್ತಿದ್ದರು. ಮಕ್ಕಳು ಕೂಡ ತಮಗೆ ಒಂದೇ ರೀತಿಯ ವಸ್ತುಗಳ ಆಗಬೇಕು ಎಂದು ತಂದೆಯನ್ನು ಒತ್ತಾಯಿಸುತ್ತಿದ್ದರು. ಹೀಗಾಗಿ ಬಡ ವ್ಯಾಪಾರಿಯಾಗಿದ್ದ ತಂದೆಗೆ ಮತ್ತಷ್ಟು ಕಷ್ಟವಾಗುತ್ತಿತ್ತು. ಆದರೂ ಧೃತಿಗೆಡದ ತಂದೆ ಮಕ್ಕಳು ಕೇಳಿದ್ದೆಲ್ಲವನ್ನೂ ಕೊಡಿಸಿ ಅವರನ್ನು ಸಂತೈಸುತ್ತಿದ್ದರು.
Advertisement
ಇತ್ತ ತಾಯಿಗೆ ಹೃದಯ ಸಮಸ್ಯೆ ಉಂಟಾಯಿತು. ಇದರ ಜೊತೆ ಕುಟುಂಬಕ್ಕೆ ಆರ್ಥಿಕ ಸಮಸ್ಯೆ ಕೂಡ ಎದುರಾಯಿತು. ಹೀಗೆ ಸಮಸ್ಯೆಗಳ ಮೇಲೆ ಸಮಸ್ಯೆಗಳು ಎದುರಾದವು. ದುರಂತವೆಂದರೆ ಐವರು ಹುಟ್ಟಿದ 9 ವರ್ಷಗಳ ಬಳಿಕ ಅಂದರೆ 2004 ನೇ ಇಸ್ವಿಯಲ್ಲಿ ತಂದೆ ಆತ್ಮಹತ್ಯೆಗೆ ಶರಣಾದರು. ಈ ಮೂಲಕ ಪತ್ನಿ ಹಾಗೂ ತನ್ನ ಐವರು ಮಕ್ಕಳನ್ನು ಅಗಲಿದರು.
ತಂದೆಯ ಮರಣದ ಸುದ್ದಿ ಇಡೀ ರಾಜ್ಯವನ್ನೇ ದಿಗ್ಭ್ರಮೆಗೊಳಿಸಿತ್ತು. ಅಲ್ಲದೆ ಕುಟುಂಬದ ಸಹಾಯಕ್ಕೆ ಎಲ್ಲರೂ ಕೈಜೋಡಿಸಿದರು. ಪರಿಣಾಮ ತಾಯಿಗೆ ಸರ್ಕಾರಿ ಉದ್ಯೋಗ ಸಿಕ್ಕಿತು. ಇತ್ತ ಮಾಧ್ಯಮ ಮಂದಿಯೂ ಕುಟುಂಬದ ಜೀವನ ನಿರ್ವಹಣೆಗೆ ಸಹಾಯ ಮಾಡಿತು. ಅಂತೆಯೇ ತಾಯಿ ತನ್ನ ಮಕ್ಕಳನ್ನು ಚೆನ್ನಾಗಿ ಬೆಳೆಸಿ ಒಳ್ಳೆಯ ಶಿಕ್ಷಣವನ್ನೂ ನೀಡಿದ್ದು, ಇದೇ ತಿಂಗಳು ಈ ಐವರೂ 24ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ.
ಈ ಐವರಲ್ಲಿ ಒಬ್ಬಳು ಫ್ಯಾಶನ್ ಡಿಸೈನರ್, ಇನ್ನಿಬ್ಬರು ಅರಿವಳಿಕೆ ತಂತ್ರಜ್ಞರು(ಅನಸ್ತೇಶಿಯಾ ಟೆಕ್ನಿಶಿಯನ್ಸ್), ಮತ್ತೊಬ್ಬಳು ಆನ್ ಲೈನ್ ಬರಹಗಾರ್ತಿಯಾಗಿದ್ದಾರೆ. ಸಹೋದರ ಉತ್ರಜನ್ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ.
ಪತಿಯ ಹಠಾತ್ ಮರಣದ ಬಳಿಕ ನನಗೆ ಏನು ಮಾಡಬೇಕೆಂದು ತೋಚಲಿಲ್ಲ. ದಿನಕಳೆದಂತೆ ನಾನು ನನ್ನ ಮಕ್ಕಳನ್ನು ಸಾಕಬೇಕು. ಅದಕ್ಕೋಸ್ಕರ ಎಷ್ಟು ಕಷ್ಟವಾದರೂ ಪರವಾಗಿಲ್ಲ ಎದುರಿಸುತ್ತೇನೆ ಎಂದ ಛಲ ಬಂತು. ಮನಸ್ಸಿದ್ದರೆ ಮಾರ್ಗ ಎಂಬಂತೆ ನಾನು ಐವರು ಮಕ್ಕಳೊಂದಿಗೆ ಬದುಕಿ ತೋರಿಸಿದೆ ಎಂದು ಗಂಡನ ಮರಣದ ಬಳಿಕ ಎದುರಿಸಿದ ಕಷ್ಟಗಳನ್ನು ನೆನಪಿಸಿಕೊಂಡು ಪತ್ನಿ ಕಣ್ಣೀರು ಹಾಕಿದ್ದಾರೆ.
ಪತಿ ಜೀವಂತವಾಗಿದ್ದಾಗ ತನ್ನ ಐವರೂ ಮಕ್ಕಳಿಗೂ ಸಮಾನ ಅವಕಾಶ ಸಿಗಬೇಕು ಎಂದು ಬಯಸಿದ್ದರು. ಅವರ ಕನಸನ್ನು ನನಸು ಮಾಡುವ ಸಲುವಾಗಿ ಒಂದೇ ದಿನ ಮದುವೆ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದೇನೆ. ಆದರೆ ನನ್ನ ಮಗ ಇನ್ನಷ್ಟೂ ಎತ್ತರಕ್ಕೆ ಬೆಳೆಯಬೇಕೆಂಬ ಛಲ ಹೊಂದಿದ್ದು, ಹೀಗಾಗಿ ಆತನ ಮದುವೆ ಸ್ವಲ್ಪ ತಡವಾಗಬಹುದು ಎಂದು ಜಿಲ್ಲಾ ಕೋ-ಆಪರೇಟಿವ್ ಬ್ಯಾಂಕ್ ಉದ್ಯೋಗಿಯಾಗಿರುವ ತಾಯಿ ತಿಳಿಸಿದ್ದಾರೆ.