ಹುಬ್ಬಳ್ಳಿ: ನಿವೇಶನ ನೀಡುವುದಾಗಿ ನಂಬಿಸಿ ಜನರಿಂದ ಲಕ್ಷಾಂತರ ರೂಪಾಯಿ ಹಣ ಪಡೆದು, ನಿವೇಶನ ಕೊಡಿಸದೇ ವಂಚನೆ ಮಾಡುತ್ತಿದ್ದ ನಾಲ್ವರು ರಿಯಲ್ ಎಸ್ಟೇಟ್ ಉದ್ಯಮಿಗಳನ್ನ ಬಂಧಿಸುವಲ್ಲಿ ಹುಬ್ಬಳ್ಳಿ ಪೊಲೀಸರು ಯಶ್ವಸಿಯಾಗಿದ್ದಾರೆ.
ನಿಸರ್ಗ ರಿಯಲ್ ವೆಲ್ತ್ ಸಲ್ಯೂಷನ್, ಸ್ವೀಲರ್ ಟೌನ್, ಗ್ರೀನ್ ವ್ಯಾಲಿ ಹೆಸರಿನಲ್ಲಿ ಲೇಔಟ್‍ಗಳನ್ನ ಮಾಡಿರುವುದಾಗಿ ಆಕರ್ಷಕ ಜಾಹೀರಾತುಗಳನ್ನ ನೀಡಿ ನಿವೇಶನ ಕೊಡಿಸುವುದಾಗಿ ವಂಚಿಸುತ್ತಿದ್ದ ಮಲ್ಲಿಕಾರ್ಜುನ ಸರ್ವಿ, ನಾಗರಾಜ ಶ್ಯಾವಿ, ದಾದಾಪೀರ ಬಳ್ಳಾರಿ, ಸಂತೋಷ ಶಲವಡಿ ಬಂಧಿತ ಆರೋಪಿಗಳು.
ಆರೋಪಿಗಳು ಹುಬ್ಬಳ್ಳಿಯ ಗಿರಿನಗರದ ಮೋಹನ್ ಎಳ್ಳುಮಗ್ಗದ ಅವರಿಗೆ 30-40 ಸೈಜ್ ನಿವೇಶನ ಕೊಡಿಸುವುದಾಗಿ 5.32 ಲಕ್ಷ ರೂಪಾಯಿ ಹಣವನ್ನ ಪಡೆದುಕೊಂಡಿದ್ದರು. ಆದರೆ ನಿವೇಶನವನ್ನೂ ಕೊಡಿಸದೆ, ಹಣವನ್ನ ಮರಳಿ ನೀಡದೇ ಮೋಸ ಮಾಡಿದ್ದರು. ಹಣ ವಾಪಸ್ ಕೇಳಲು ಆರೋಪಿಗಳ ಕಚೇರಿಗೆ ತೆರಳಿದ ವೇಳೆ ಆರೋಪಿಗಳು ಮೋಹನ್‍ಗೆ ಜೀವಬೆದರಿಕೆ ಹಾಕಿ, ಅವ್ಯಾಚ ಶಬ್ದಗಳಿಂದ ನಿಂದಿಸಿದ ಬಗ್ಗೆ ಮೋಹನ್ ಹುಬ್ಬಳ್ಳಿಯ ಎಪಿಎಂಸಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು ದಾದಾಪೀರ ಬಳ್ಳಾರಿ, ಸಂತೋಷ ಶಲವಡಿರನ್ನ ಬಂಧಿಸಿದ್ದರು. ಇದೀಗ ಪ್ರಮುಖ ಆರೋಪಿಯಾಗಿರುವ ನಾಗರಾಜ ಶ್ಯಾವಿಯನ್ನ ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ ಜಮೀನಿಗೆ ಸಂಬಧಿಸಿದ ಕೆಲ ದಾಖಲೆಗಳು ಹಾಗೂ ಪ್ರೇಸ್ ಎಂದು ಹೆಸರಿರುವ ಕಾರನ್ನ ಜಪ್ತಿ ಮಾಡಿಕೊಂಡಿದ್ದಾರೆ. ಹೀಗಾಗಿ ಬಂಧಿತ ಆರೋಪಿ ನಕಲಿ ಪತ್ರಕರ್ತನೋ ಅಸಲಿ ಪತ್ರಕರ್ತನೋ ಅನ್ನೋ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಪ್ರಕರಣದ ಇನೋರ್ವ ಆರೋಪಿ ಮಲ್ಲಿಕಾರ್ಜುನ ಸರ್ವಿ ಪರಾರಿಯಾಗಿದ್ದು, ಆತನ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ದಿಲೀಪ್ ಅವರು ನಿಸರ್ಗ ವೆಲ್ತ್ ಸಲ್ಯೂಷನ್ ಮತ್ತು ಓಂಕಾರ ಡೆವಲಪರ್ಸ್ ಆಂಡ್ ಬಿಲ್ಡರ್ಸ್ ಹೆಸರಿನ ರಿಯಲ್ ಎಸ್ಟೇಟ್ ಕಂಪನಿಯ ಜೊತೆ ವ್ಯವಹರಿಸುವಾಗ ಜಾಗರೂಕತೆಯಿಂದ ಇರುವಂತೆ ತಿಳಿಸಿದ್ದಾರೆ. ವಂಚನೆಯ ಕುರಿತು ಹುಬ್ಬಳ್ಳಿಯ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಹುಬ್ಬಳ್ಳಿ ಧಾರವಾಡ ಅವಳಿ ನಗರ ದಿನೇ ದಿನೇ ಬೆಳೆಯುತ್ತಿದ್ದಂತೆ ಈ ರೀತಿಯ ಹಲವು ನಕಲಿ ರಿಯಲ್ ಎಸ್ಟೇಟ್ ಕಂಪನಿಗಳು ನಿವೇಶನ ಕೊಡಿಸುವುದಾಗಿ ಗ್ರಾಹಕರನ್ನ ವಂಚನೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ.