– ಮಧ್ಯಪ್ರದೇಶ ಸರ್ಕಾರಕ್ಕೆ 4 ಲಕ್ಷ ಕೋಟಿ ಸಾಲದ ಹೊರೆ
ಭೋಪಾಲ್: ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಎರಡೇ ವಾರಗಳಲ್ಲಿ ಮೋಹನ್ ಯಾದವ್ (Mohan Yadav) ಸರ್ಕಾರ ಬಿಜೆಪಿ ನೀಡಿದ್ದ ಉಚಿತ ಭರವಸೆಗಳನ್ನ ಈಡೇರಿಸಲು ಆರ್‌ಬಿಐ ಮೊರೆ ಹೋಗಿದೆ. ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ (RBI) 2,000 ಕೋಟಿ ರೂ. ಸಾಲ ಕೇಳಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.
ಮಧ್ಯಪ್ರದೇಶ ವಿಧಾನಸಭೆ (Madhya Pradesh) ಚುನಾವಣೆಗೂ ಮುನ್ನ 96 ಪುಟಗಳ `ಸಂಕಲ್ಪ ಪತ್ರ’ ಹೆಸರಿನ ಪ್ರಣಾಳಿಕೆಯನ್ನು ಬಿಜೆಪಿ ಬಿಡುಗಡೆ ಮಾಡಿತ್ತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan) ಮೊದಲಾದವರು ಈ ಸಂದರ್ಭದಲ್ಲಿ ಹಾಜರಿದ್ದರು. ಬಿಜೆಪಿ (BJP) ನೀಡಿದ ಉಚಿತ ಭರವಸೆಗಳನ್ನು ಈಡೇರಿಲು ನೂತನ ಸಿಎಂ ಆರ್‌ಬಿಐ ಮೊರೆ ಹೋಗಿದ್ದಾರೆ. ಹಿಂದಿನ ಸಿಎಂ ಚೌಹಾಣ್ ನೇತೃತ್ವದ ಸರ್ಕಾರದಿಂದ 4 ಲಕ್ಷ ಕೋಟಿ ರೂ. ಸಾಲದ ಹೊರೆ ಹೊತ್ತಿದ್ದ ನೂತನ ಸರ್ಕಾರ ಮತ್ತೆ ಸಾಲಕ್ಕಾಗಿ ಆರ್‌ಬಿಐ ಮೊರೆ ಹೋಗಿದೆ.
Advertisement
Advertisement
ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಸರ್ಕಾರ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ಪಡೆದಿದ್ದ 5,000 ಕೋಟಿ ರೂ. ಸೇರಿದಂತೆ 2023ರಲ್ಲಿ ಸರಿ ಸುಮಾರು 44,000 ಕೋಟಿ ರೂ. ಸಾಲ ತೆಗೆದುಕೊಂಡಿದೆ. ಇದನ್ನೂ ಓದಿ: ನೂತನ ಕುಸ್ತಿ ಫೆಡರೇಶನ್ ಸಮಿತಿಯನ್ನೇ ಅಮಾನತುಗೊಳಿಸಿದ ಕ್ರೀಡಾ ಸಚಿವಾಲಯ
Advertisement
ಈ ಕುರಿತು ಮಾತನಾಡಿರುವ ಮೋಹನ್ ಯಾದವ್, ರಾಜ್ಯ ಸರ್ಕಾರದಲ್ಲಿ ಯಾವುದೇ ಬಿಕ್ಕಟ್ಟು ಇಲ್ಲ. ಹಣದ ಕೊರತೆಯಿಂದ ಕಲ್ಯಾಣ ಯೋಜನೆಗಳು ಸ್ಥಗಿತಗೊಳ್ಳುವುದಿಲ್ಲ. ಹಿಂದಿನ ಸರ್ಕಾರದ ಎಲ್ಲಾ ಯೋಜನೆಗಳು ಮುಂದುವರಿಯುತ್ತವೆ ಎಂದು ಭರವಸೆ ನೀಡಿದ್ದಾರೆ.
Advertisement
ಮಧ್ಯಪ್ರದೇಶ ಸರ್ಕಾರದ ಬೆಳವಣಿಗಳ ಬಗ್ಗೆ ಪ್ರತಿಪಕ್ಷಗಳು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ವಕ್ತಾರ ಅಬ್ಬಾಸ್ ಹಫೀಜ್ ಮಾತನಾಡಿ, ಮಧ್ಯಪ್ರದೇಶದ ಪ್ರತಿಯೊಬ್ಬ ಪ್ರಜೆಯೂ ಈಗ ಸಾಲದಲ್ಲಿದ್ದಾನೆ. ಹುಟ್ಟುವ ಪ್ರತಿ ಮಗು ಈಗ 40,000 ರೂ. ಸಾಲದಲ್ಲಿದೆ. ಬಿಜೆಪಿಯು ಮಧ್ಯಪ್ರದೇಶವನ್ನು ನಿರಂತರವಾಗಿ ದಿವಾಳಿಯತ್ತ ತಳ್ಳುತ್ತಿದೆ. ಇದೆಲ್ಲವು ಅವರಿಗೆ ಯಾವಾಗ ಅರ್ಥವಾಗುತ್ತದೆ? ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದರೆ, ಆದಾಯ ಗಳಿಸುವ ಮೂಲವನ್ನು ಹುಡುಕುತ್ತಿತ್ತು ಎಂದು ಟೀಕಿಸಿದ್ದಾರೆ.
ಬಿಜೆಪಿ ನೀಡಿದ್ದ ಭರವಸೆಗಳೇನು?
ಲಾಡ್ಲಿ ಬಹ್ನಾ ಮತ್ತು ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ 450 ರೂ.ಗೆ ಎಲ್‌ಪಿಜಿ ಸಿಲಿಂಡರ್. ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ರೈತರಿಗೆ ವಾರ್ಷಿಕ 12 ಸಾವಿರ ರೂ. ಹಣಕಾಸು ನೆರವು. ಮುಂದಿನ 5 ವರ್ಷಗಳವರೆಗೆ ಜನರಿಗೆ ಉಚಿತವಾಗಿ ಪಡಿತರ ವಿತರಣೆ. ರೈತರಿಂದ ಕ್ವಿಂಟಾಲ್‌ಗೆ 2,700 ರೂ.ಗೆ ಗೋಧಿ, 3,100 ರೂ.ಗೆ ಭತ್ತ ಖರೀದಿ. ಪ್ರತಿಯೊಬ್ಬರಿಗೂ 12ನೇ ತರಗತಿವರೆಗೆ ಉಚಿತ ಶಿಕ್ಷಣ. ಎಲ್‌ಕೆಜಿಯಿಂದ ಸ್ನಾತಕೋತ್ತರ ಪದವಿವರೆಗೆ ಬಡ ಕುಟುಂಬದ ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ. ಪ್ರತಿ ಬಾಲಕಿಗೆ 2 ಲಕ್ಷ ರೂ. (ಬಾಲಕಿಗೆ 21 ವರ್ಷವಾದ ಬಳಿಕ ಪಾವತಿ) ಹಣಕಾಸು ನೆರವು. 6 ಹೊಸ ಎಕ್ಸ್‌ಪ್ರೆಸ್‌ವೇ ನಿರ್ಮಾಣ. ಬಡವರಿಗೆ ಉಚಿತವಾಗಿ ಸುಸಜ್ಜಿತ ಮನೆಗಳನ್ನ ನಿರ್ಮಿಸುವುದಾಗಿ ಬಿಜೆಪಿ ಭರವಸೆಗಳನ್ನ ಘೋಷಣೆ ಮಾಡಿತ್ತು. ಇದನ್ನೂ ಓದಿ: ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುವಾಗ ಉಗ್ರರಿಂದ ಗುಂಡೇಟು – ಜಮ್ಮು ಕಾಶ್ಮೀರದ ನಿವೃತ್ತ ಪೊಲೀಸ್ ಅಧಿಕಾರಿ ಬಲಿ