ಜೆರುಸಲೇಂ: ಒತ್ತೆಯಾಳಾಗಿ (Hostages) ಇಟ್ಟುಕೊಂಡಿದ್ದ ನಾಲ್ವರು ಇಸ್ರೇಲಿ ಮಹಿಳಾ ಸೈನಿಕರನ್ನು (Israeli Soldiers) ಹಮಾಸ್ (Hamas) ಉಗ್ರರು ಬಿಡುಗಡೆ ಮಾಡಿದ್ದಾರೆ. ಒತ್ತೆಯಾಳುಗಳನ್ನು ರೆಡ್ ಕ್ರಾಸ್ ಸದಸ್ಯರಿಗೆ ಹಸ್ತಾಂತರಿಸಲಾಯಿತು. ಬಳಿಕ ಅವರನ್ನು ಗಾಜಾದಿಂದ ವಾಹನದಲ್ಲಿ ಕರೆದೊಯ್ಯಲಾಯಿತು.
ನಾಲ್ವರನ್ನು ಅಕ್ಟೋಬರ್ 7, 2023ರಲ್ಲಿ ಗಾಜಾ ಗಡಿಯಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ನಹಲ್ ಓಜ್ ಮಿಲಿಟರಿ ನೆಲೆಯಲ್ಲಿ ಸೆರೆಹಿಡಿಯಲಾಗಿತ್ತು. ಅವರನ್ನು ಬಿಡುಗಡೆ ಮಾಡುವುದಾಗಿ ಹಮಾಸ್ ಶುಕ್ರವಾರ ಹೇಳಿತ್ತು. ಇಸ್ರೇಲ್ ಮತ್ತು ಗಾಜಾ ನಡುವಿನ ಕದನ ವಿರಾಮ ಒಪ್ಪಂದದ ಅಡಿಯಲ್ಲಿ ಇದು ಎರಡನೇ ವಿನಿಮಯವಾಗಿದೆ.
ಒಪ್ಪಂದದ ಪ್ರಕಾರ ನಾಲ್ವರು ಇಸ್ರೇಲಿ ಮಹಿಳಾ ಸೈನಿಕರ ಬಿಡುಗಡೆಯ ನಂತರ, ಇಸ್ರೇಲ್ ಪ್ಯಾಲೆಸ್ತೇನಿಯನ್ ಕೈದಿಗಳನ್ನು ಬಿಡುಗಡೆ ಮಾಡಬೇಕು. ಆದರೆ ಈ ಬಗ್ಗೆ ಎರಡೂ ಕಡೆಯಿಂದ ನಿಖರವಾದ ಕೈದಿಗಳ ಸಂಖ್ಯೆಯನ್ನು ನಿರ್ದಿಷ್ಟಪಡಿಸಲಾಗಿಲ್ಲ.
ಕದನ ವಿರಾಮ ಒಪ್ಪಂದದ ಪ್ರಕಾರ, ಇನ್ನೂ ಜೀವಂತವಾಗಿದ್ದಾರೆ ಎಂದು ನಂಬುವ 33 ಒತ್ತೆಯಾಳುಗಳನ್ನು ಹಮಾಸ್ ಉಗ್ರರು ಬಿಡುಗಡೆ ಮಾಡಬೇಕು. ಇದಕ್ಕೆ ಬದಲಾಗಿ ಇಸ್ರೇಲ್ ಜೈಲುಗಳಲ್ಲಿ ಇರಿಸಲಾಗಿರುವ 1900 ಪ್ಯಾಲೆಸ್ತೇನಿಯನ್ ಕೈದಿಗಳನ್ನು ಬಿಡುಗಡೆ ಮಾಡಬೇಕು.
ಕದನ ವಿರಾಮ ಘೋಷಣೆಯ ನಂತರ, ಒಂದು ವರ್ಷಕ್ಕೂ ಹೆಚ್ಚು ಕಾಲ ನಡೆದ ನಿರಂತರ ಯುದ್ಧದಿಂದ ಸ್ಥಳಾಂತರಗೊಂಡ ಅನೇಕ ಗಾಜಾ ನಿವಾಸಿಗಳು ಮನೆಗೆ ಮರಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಆ ಮನೆಗಳು ಸಂಪೂರ್ಣ ನಾಶವಾಗಿವೆ ಎಂದು ವರದಿಯಾಗಿದೆ.