ಜೈಪುರ: ವೈಷ್ಣೋದೇವಿ ಯಾತ್ರಾರ್ಥಿಗಳಿಗೆ ನಕಲಿ ಹೆಲಿಕಾಪ್ಟರ್ ಟಿಕೆಟ್‍ಗಳನ್ನು ಮಾರಾಟ ಮಾಡುತ್ತಿದ್ದ ನಾಲ್ಕು ಜನರ ತಂಡವನ್ನು ಬಂಧಿಸಿರುವ ಘಟನೆ ರಾಜಸ್ಥಾನದ ಕೋಟಾದಲ್ಲಿ ಬೆಳಕಿಗೆ ಬಂದಿದೆ.
ಜಮ್ಮು ಮತ್ತು ರಾಜಸ್ಥಾನದ ಸೈಬರ್ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಸುನೀಲ್ ಚಾವ್ಲಾ, ದೀಪಕ್, ಗಜಾನಂದ್ ಮತ್ತು ಮೋನು ಪಂಕಜ್ ಬಂಧಿತ ಆರೋಪಿಗಳು. ವೈಷ್ಣೋದೇವಿ ದೇಗುಲಕ್ಕೆ ಭೇಟಿ ನೀಡಲು ಉದ್ದೇಶಿಸಿರುವ ಯಾತ್ರಾರ್ಥಿಗಳಿಗೆ ವಿಶೇಷ ಟೂರ್ ಪ್ಯಾಕೇಜ್ ಅಡಿಯಲ್ಲಿ ಹೆಲಿಕಾಪ್ಟರ್ ಟಿಕೆಟ್ ನೀಡುವ ನಕಲಿ ಆನ್‍ಲೈನ್ ಸೈಟ್‍ಗಳ ಕುರಿತು ಶ್ರೀ ಮಾತಾ ವೈಷ್ಣೋದೇವಿ ಪುಣ್ಯಕ್ಷೇತ್ರ ಮಂಡಳಿ, ಹೆಲಿಕಾಪ್ಟರ್ ಸೇವಾ ಸಂಸ್ಥೆಗಳು ಹಾಗೂ ಹಲವು ಯಾತ್ರಾರ್ಥಿಗಳು ನೀಡಿದ್ದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ.
ಈ ಸಂಬಂಧ ನಕಲಿ ವೆಬ್‍ಸೈಟ್‍ಗಳ ಬಗ್ಗೆ ಡೊಮೇನ್ ಪೂರೈಕೆದಾರ `ಗೋಡ್ಯಾಡಿ’ಯಿಂದ ಮಾಹಿತಿ ಪಡೆದುಕೊಂಡ ಜಮ್ಮು ಪೊಲೀಸರು ಎಫ್‍ಐಆರ್ ದಾಖಲಿಸಿದ್ದರು. ಡೊಮೇನ್ ಸಹಾಯದಿಂದ ಐಪಿ ವಿಳಾಸ ಹಾಗೂ ನೋಂದಣಿ ವಿವರಗಳನ್ನು ಆಧರಿಸಿ ತನಿಖೆ ಮುಂದುವರಿಸಿದಾಗ ಸುಮಾರು 40 ನಕಲಿ ವೆಬ್‍ಸೈಟ್‍ಗಳು ಪತ್ತೆಯಾಗಿವೆ. ಇದನ್ನೂ ಓದಿ: ಪರೀಕ್ಷಾ ಸಮಯದಲ್ಲೇ ಉಪಚುನಾವಣೆ ಯಾಕೆ – ಆಯೋಗದ ವಿರುದ್ಧ ಮಮತಾ ಕಿಡಿ
ಇದೇ ವೇಳೆ ರಾಜಸ್ಥಾನದ ಕೋಟಾದಲ್ಲಿ ವಂಚಕರು ಎಲ್ಲಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಸೈಬರ್ ತಜ್ಞರ ತನಿಖೆ ಆಧಾರದ ಮೇಲೆ ಜಮ್ಮುವಿನ ಸೈಬರ್ ಪೊಲೀಸ್ ವಷ್ಠಾಧಿಕಾರಿ ನರೇಶ್‍ಸಿಂಗ್ ಅವರು ವಿಶೇಷ ತಂಡ ರಚಿಸಿ ವಂಚಕರನ್ನು ಬಂಧಿಸಲು ರಾಜಸ್ಥಾನಕ್ಕೆ ಕಳುಹಿಸಿದರು. ಈ ತಂಡವು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಅವರಿಂದ ದೋಷಾರೋಪಣೆಯ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಮುಂದಿನ ತನಿಖೆಗಾಗಿ ಜಮ್ಮುವಿಗೆ ಕರೆತರಲಾಗುತ್ತಿದೆ ಎಂದು ಸೈಬರ್ ಪೊಲೀಸರು ಮಾಹಿತಿ ನೀಡಿದ್ದಾರೆ.