ಚಿಕ್ಕಮಗಳೂರು: ಕಾಫಿನಾಡಿನ ಮಲೆನಾಡು ಭಾಗದ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಮಲೆನಾಡಿನ ಜೀವನದಿಗಳಾದ ತುಂಗ-ಭದ್ರಾ ಹಾಗೂ ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿವೆ.
ಜಿಲ್ಲೆಯ ಕುದುರೆಮುಖ, ಕೊಪ್ಪ, ಶೃಂಗೇರಿ, ಕಳಸ, ಸಂಸೆ, ಬಾಳೆಹೊಳೆ, ಬಸ್ರಿಕಟ್ಟೆ ಹಾಗೂ ತನಿಕೋಡು ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿದೆ. ಇದರಿಂದ ತುಂಗಾ-ಭದ್ರ ನದಿಗಳು ಮೈದುಂಬಿ ಹರಿಯುತ್ತಿವೆ. ಪಶ್ಚಿಮ ಘಟ್ಟದ ಸಾಲಿನಲ್ಲಿ ಕಳೆದ 3 ದಿನಗಳಿಂದ ಮುಂಗಾರು ಚುರುಕಾಗಿರುವ ಹಿನ್ನೆಲೆ ನದಿಗಳ ಒಳಹರಿವಿನ ಪ್ರಮಾಣದಲ್ಲೂ ಭಾರೀ ಏರಿಕೆಯಾಗಿದೆ.
Advertisement
Advertisement
ಹೊರನಾಡು ಅನ್ನಪೂರ್ಣೇಶ್ವರಿ ದೇಗುಲಕ್ಕೆ ಸಂಪರ್ಕದ ಕೊಂಡಿಯಾಗಿರುವ ಹೆಬ್ಬಾಳೆ ಸೇತುವೆ ಮುಳುಗುವ ಹಂತದಲ್ಲಿದ್ದು, ನದಿ ನೀರು ಸೇತುವೆಯನ್ನು ಮುಳುಗಿಸಲು ಕೇವಲ ನಾಲ್ಕು ಅಡಿಯಷ್ಟೇ ಬಾಕಿ ಇದೆ. ಒಂದು ವೇಳೆ ಸೇತುವೆ ಮುಳುಗಡೆಯಾದರೆ ಕಳಸ ಹಾಗೂ ಹೊರನಾಡಿನ ಸಂಪರ್ಕ ಕಡಿತಗೊಳ್ಳಲಿದೆ.
Advertisement
Advertisement
ಕಳೆದ 3 ದಿನಗಳಿಂದ ಮಲೆನಾಡಲ್ಲಿ ಮುಂಗಾರು ಚುರುಕಾಗಿರುವುದರಿಂದ ರೈತರು ಹಾಗೂ ಜನಸಾಮಾನ್ಯರ ಮೊಗದಲ್ಲಿ ಸಂತಸ ಮೂಡಿಸಿದೆ. ಈ ಬಾರಿ ಜೂನ್ ತಿಂಗಳ ಮುಂಗಾರು ಕೈಕೊಟ್ಟ ಕಾರಣಕ್ಕೆ ರೈತಾಪಿ ವರ್ಗ ಕಂಗಾಲಾಗಿ ಕುಳಿತಿತ್ತು. ಆದರೆ ಜುಲೈ ಆರಂಭದಲ್ಲಿ ಮಳೆರಾಯ ಆಗಮಿಸಿ ರೈತರ ಆತಂಕವನ್ನು ಕೊಂಚ ದೂರ ಮಾಡಿದ್ದಾನೆ. ಹೀಗಾಗಿ ಸದ್ಯ ಮಲೆನಾಡಿನಲ್ಲಿ ಚುರುಕುಗೊಂಡಿರುವ ಮಳೆಯನ್ನೇ ನಂಬಿ ಕೃಷಿ ಕಾರ್ಯವನ್ನು ಆರಂಭಿಸಿಸಲು ರೈತರು ನಿರ್ಧರಿಸಿದ್ದಾರೆ.
ಈ ಭಾರಿ ಮಳೆಯ ಅಭಾವ ಎಷ್ಟರಮಟ್ಟಿಗೆ ಕಾಡಿತ್ತು ಎಂದರೆ ಮಲೆನಾಡಿನಲ್ಲೂ ನೀರಿಗಾಗಿ ಹಾಹಾಕಾರ ಎದುರಾಗಿತ್ತು. ಜನ ಜಾನುವಾರುಗಳಿಗೆ ಸರಿಯಾಗಿ ಕುಡಿಯುವ ನೀರು ಸಿಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಸದ್ಯ ಮಲೆನಾಡು ಹಾಗೂ ಕಾಫಿನಾಡಿನ ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದು ಖುಷಿಯ ಸಂಗತಿಯಾಗಿದೆ.