ನವದೆಹಲಿ: ಗುರುಗ್ರಾಮ್‌ನ ದೌಲತಾಬಾದ್ ಇಂಡಸ್ಟ್ರಿಯಲ್ ಏರಿಯಾದಲ್ಲಿ ಫೈರ್‌ಬಾಲ್ ತಯಾರಿಕಾ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.
ಮೃತರನ್ನು ಕೌಶಿಕ್, ಅರುಣ್, ಪ್ರಶಾಂತ್ ಮತ್ತು ರಾಮ್ ಅವಧ್ ಎಂದು ಗುರುತಿಸಲಾಗಿದೆ. ಈ ಘಟನೆ ಇಂದು (ಶನಿವಾರ) ಮುಂಜಾನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಘಟನೆ ನಡೆದ ಕೂಡಲೇ ಸುಮಾರು 24 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾದವು.
ಈ ಸಂಬಂಧ ಅಗ್ನಿಶಾಮಕ ದಳದ ಅಧಿಕಾರಿ ರಮೇಶ್ ಕುಮಾರ್ ಪ್ರತಿಕ್ರಿಯಿಸಿ, ಸ್ಥಳಕ್ಕೆ ಸಾಕಷ್ಟು ಅಗ್ನಿಶಾಮಕ ವಾಹನಗಳನ್ನು ತಂದಿದ್ದೇವೆ. ಕಾರ್ಯಾಚರಣೆಯಲ್ಲಿ ಸುಮಾರು 24 ಅಗ್ನಿಶಾಮಕ ಟೆಂಡರ್‌ಗಳನ್ನು ನಿಯೋಜಿಸಲಾಗಿತ್ತು. ಸ್ಪೋಟದ ರಭಸಕ್ಕೆ ಸಮೀಪದ ಕಟ್ಟಡಗಳಿಗೂ ಹಾನಿಯಾಗಿದೆ ಎಂದು ತಿಳಿಸಿದ್ದಾರೆ.
ಘಟನೆ ನಡೆದಾಗ ಕಾರ್ಖಾನೆಯೊಳಗೆ 15 ಮಂದಿ ಇದ್ದರು. ಘಟನೆಗೆ ಕಾರಣ ಏನು ಎಂಬುದರ ಬಗ್ಗೆ ತನಿಖೆ ನಡೆಸಲು ಐವರು ಸದಸ್ಯರ ತಂಡವನ್ನು ರಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾತ್ರಿಯಿಡೀ ಸ್ಫೋಟದ ಸದ್ದು ಕೇಳಿಸುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅವಘಡದಿಂದ ಅಕ್ಕ-ಪಕ್ಕದ ಕಂಪನಿಗಳೂ ಭಾರಿ ನಷ್ಟ ಅನುಭವಿಸಿವೆ.