ಬಳ್ಳಾರಿ: ಓಮ್ನಿ ಕಾರಿಗೆ ಲಾರಿ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲಿಯೇ ನಾಲ್ವರು ಸಾವನಪ್ಪಿರುವ ಘಟನೆ ಜಿಲ್ಲೆಯ ಹೊಸಪೇಟೆ ತಾಲೂಕಿನ ಪಿಕೆ ಹಳ್ಳಿ ಬಳಿ ನಡೆದಿದೆ.
ಚಿತ್ರದುರ್ಗದ ಹಿರಿಯೂರಿನವರಾದ ಚಾಲಕ ಶ್ರೀನಿವಾಸ (46), ವೆಂಕಟಮ್ಮ (46), ನಳಿನಿ (30) ಹಾಗೂ ಮತ್ತೊಬ್ಬ ಮಹಿಳೆ ಮೃತ ದುರ್ದೈವಿಗಳು. ಘಟನೆಯಲ್ಲಿ 8 ಜನ ಗಾಯಗೊಂಡಿದ್ದು, ಅವರನ್ನ ಸ್ಥಳೀಯ ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಹಿರಿಯೂರು ತಾಲೂಕಿನಿಂದ ಹೊಸಪೇಟೆಯ ಸಂಬಂಧಿಕರೊಬ್ಬರ ಅಂತಿಮ ದರ್ಶನಕ್ಕಾಗಿ ಕಾರಿನಲ್ಲಿ ಒಟ್ಟು 12 ಜನರು ತೆರಳುತ್ತಿದ್ದರು. ಆದರೆ ಪಿಕೆ ಹಳ್ಳಿಯ ಹೆದ್ದಾರಿ 14 ರಸ್ತೆಯಲ್ಲಿ ಕಾರಿಗೆ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಲಾರಿ ಚಾಲಕನ ನಿರ್ಲಕ್ಷ್ಯದಿಂದ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಸ್ಥಳೀಯರು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಬಂದು ನುಜ್ಜುಗುಜ್ಜಾಗಿದ್ದ ಕಾರಿನಲ್ಲಿದ್ದವರನ್ನು ಹೊರ ತಗೆದು ರಕ್ಷಣೆ ಮಾಡಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಅಪಘಾತ ಸಂಭವಿಸಿದ ಸ್ಥಳಕ್ಕೆ ಹೊಸಪೇಟೆ ಪೊಲೀಸರು ಹಾಗೂ ಗಾದಿಗನೂರುಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.