ಮುಂಬೈ: ಮಹಾರಾಷ್ಟ್ರದ (Maharashtra) ವಿವಿಧ ಜಿಲ್ಲೆಗಳಲ್ಲಿ ಗಣೇಶ ಮೂರ್ತಿ (Ganesh Idol Immersion) ವಿಸರ್ಜನೆ ವೇಳೆ ಕನಿಷ್ಠ ನಾಲ್ವರು ಜನರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, 13 ಮಂದಿ ನಾಪತ್ತೆಯಾಗಿದ್ದಾರೆ.
ಪುಣೆ ಜಿಲ್ಲೆಯ ಚಕನ್ ಪ್ರದೇಶದಲ್ಲಿ, ಪ್ರತ್ಯೇಕ ಘಟನೆಗಳಲ್ಲಿ ನಾಲ್ವರು ಜನರು ಕೊಚ್ಚಿಹೋಗಿದ್ದಾರೆ. ವಾಕಿ ಖುರ್ದ್‌ನಲ್ಲಿ ಭಾಮಾ ನದಿಯಲ್ಲಿ ಇಬ್ಬರು ಪುರುಷರು ಮತ್ತು ಶೆಲ್ ಪಿಂಪಾಲ್‌ಗಾಂವ್‌ನಲ್ಲಿ ಮತ್ತೊಬ್ಬರು ಕೊಚ್ಚಿ ಹೋಗಿದ್ದಾರೆ. ಪುಣೆ ಗ್ರಾಮೀಣ ಪ್ರದೇಶದ ಬಿರ್ವಾಡಿಯಲ್ಲಿ ಮತ್ತೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಬ್ಬರು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಉಳಿದ ಇಬ್ಬರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಇದನ್ನೂ ಓದಿ: ಜಾರ್ಖಂಡ್‌ನಲ್ಲಿ ಎನ್‌ಕೌಂಟರ್ – ಮೋಸ್ಟ್ ವಾಂಟೆಡ್ ಮಾವೋವಾದಿಯ ಹತ್ಯೆಗೈದ ಭದ್ರತಾ ಪಡೆ
ನಾಂದೇಡ್ ಜಿಲ್ಲೆಯ ಗಡೇಗಾಂವ್‌ನಲ್ಲಿ ನದಿಯಲ್ಲಿ ಮೂವರು ಕೊಚ್ಚಿ ಹೋಗಿದ್ದಾರೆ. ಅವರ ಪೈಕಿ ಒಬ್ಬನನ್ನು ರಕ್ಷಿಸಲಾಗಿದೆ. ಇನ್ನಿಬ್ಬರಿಗಾಗಿ ಹುಡುಕಾಟ ನಡೆಯುತ್ತಿದೆ. ನಾಶಿಕ್, ಜಲಗಾಂವ್, ಥಾಣೆ ಮತ್ತು ಅಮರಾವತಿಯಲ್ಲೂ ಇದೇ ರೀತಿಯ ಘಟನೆಗಳು ವರದಿಯಾಗಿವೆ. ನಾಶಿಕ್‌ನಲ್ಲಿ, ಮುಳುಗಿಸುವ ಪ್ರಕ್ರಿಯೆಯಲ್ಲಿ ನಾಲ್ವರು ಮುಳುಗಿ ಸಾವನ್ನಪ್ಪಿದ್ದಾರೆ. ಸಿನ್ನಾರ್‌ನಲ್ಲಿ ಒಂದು ಶವ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಜಲಗಾಂವ್‌ನಲ್ಲಿ ಪ್ರತ್ಯೇಕ ಘಟನೆಗಳಲ್ಲಿ ಮೂವರು ಜನರು ಕೊಚ್ಚಿ ಹೋಗಿದ್ದು, ಅವರ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿದಿದೆ. ಥಾಣೆ ಜಿಲ್ಲೆಯಲ್ಲಿ ಮೂವರು ಜನರು ಕೊಚ್ಚಿ ಹೋಗಿದ್ದು, ಇದುವರೆಗೆ ಒಂದು ಮೃತದೇಹ ಪತ್ತೆಯಾಗಿದೆ. ಅಮರಾವತಿಯಲ್ಲಿ ಗಣೇಶ ಮೂರ್ತಿ ಮುಳುಗಿಸುವ ಸಮಯದಲ್ಲಿ ಒಬ್ಬ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬಾಲಕನ ಕೊಲೆ ಆರೋಪ – ಹಿಗ್ಗಾಮುಗ್ಗಾ ಥಳಿಸಿ ದಂಪತಿಯ ಹತ್ಯೆ
ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ನದಿಗಳು ಮತ್ತು ಜಲಮೂಲಗಳು ಉಕ್ಕಿ ಹರಿಯುತ್ತಿದ್ದು, ರಾಜ್ಯ ವಿಪತ್ತು ನಿರ್ವಹಣಾ ತಂಡಗಳು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.