ಬೆಂಗಳೂರು: ಏಪ್ರಿಲ್ 18 ರಂದು ರಾಜ್ಯದ ದಕ್ಷಿಣ ಕ್ಷೇತ್ರಗಳಲ್ಲಿ ಮೊದಲ ಹಂತದ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರದಲ್ಲಿ ಸ್ವಲ್ಪ ವ್ಯತ್ಯಯವಾಗಲಿದೆ.
ಲೋಕಸಭೆಯ ಮೊದಲ ಹಂತದ ಚುನಾವಣೆಗೆ ಚುನಾವಣಾ ಆಯೋಗ ಒಟ್ಟು 3,314 ಕೆಎಸ್‌ಆರ್‌ಟಿಸಿ ಬಸ್‍ಗಳನ್ನು 3 ದಿನಗಳ ಕಾಲ ಬಳಸಿಕೊಳ್ಳಲಿದೆ. ಹೀಗಾಗಿ ಇಂದಿನಿಂದ 4 ದಿನಗಳವರೆಗೆ ಕೆಎಸ್‌ಆರ್‌ಟಿಸಿ ಬಸ್‍ಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ.
ಚುನಾವಣಾ ಕೆಲಸಕ್ಕೆ ಬಸ್‍ಗಳು ಬಳಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಕೆಎಸ್‌ಆರ್‌ಟಿಸಿ ಮನವಿ ಮಾಡಿದೆ. ಇದೇ ವೇಳೆ ವೋಲ್ವೋ ಹಾಗೂ ಇತರೇ ಐಷಾರಾಮಿ ಬಸ್‍ಗಳ ಸಂಚಾರದಲ್ಲಿ ಯಾವುದೇ ವ್ಯತ್ಯಯ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ದಕ್ಷಿಣ ಕನ್ನಡ, ಉಡುಪಿ- ಚಿಕ್ಕಮಗಳೂರು, ಹಾಸನ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಹಾಗೂ ಕೋಲಾರದಲ್ಲಿ ಗುರುವಾರ ಚುನಾವಣೆ ನಡೆಯಲಿದೆ.