ಬೆಂಗಳೂರು: ಕಳೆದ ಮೂರು ದಿನಗಳಿಂದ ಮಳೆರಾಯ ಆರ್ಭಟಿಸುತ್ತಿದ್ದು, ರಾಜ್ಯದ ಹಲವೆಡೆ ನದಿ, ಕೊಳ್ಳಗಳು ತುಂಬಿ, ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಇನ್ನು ನಾಲ್ಕು ದಿನಗಳ ಕಾಲ ರಾಜ್ಯದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ ನದಿಪಾತ್ರದ ಪ್ರದೇಶ, ಫಾಲ್ಸ್ ಇರುವ ಕಡೆ, ಕರಾವಳಿ ಭಾಗದ ಕಡೆ ವೀಕೆಂಡ್ ಪ್ರವಾಸವನ್ನು ಕೈಬಿಡುವುದು ಒಳ್ಳೆಯದು ಅಂತಾ ಹವಾಮಾನ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಕರ್ನಾಟಕ ಸೇರಿದಂತೆ ಒಟ್ಟು ಒಂಬತ್ತು ರಾಜ್ಯಗಳಿಗೆ ಪ್ರವಾಹ ಭೀತಿ ಇದೆ.
ಕೇರಳದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಮೈಸೂರು ಜಿಲ್ಲೆಯ ಕಬಿನಿ ಜಲಾಶಯದ ಒಳ ಹರಿವು ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿದೆ. ಜಲಾಶಯ ಭರ್ತಿ ಆಗಿರೋ ಕಾರಣ ಒಳಹರಿವಿನ ಪ್ರಮಾಣದಷ್ಟೆ ಹೊರಹರಿವು ಹೆಚ್ಚಿಸಲಾಗಿದೆ. ಇದರಿಂದ ಮೈಸೂರು ಭಾಗದ ಬಹುತೇಕ ಪ್ರದೇಶಗಳು ಜಲಾವೃತವಾಗಿವೆ. ಇತ್ತ ಕಪಿಲೆ ತುಂಬಿ ಹರಿಯುತ್ತಿರುವ ಕಾರಣ ಸುತ್ತೂರು ಮಠದ ಶ್ರೀ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ನದಿಗೆ ಗಂಗಾ ಪೂಜೆ ನೆರವೇರಿಸಿ ಬಾಗಿನ ಅರ್ಪಿಸಿದ್ರು. ನದಿ ತುಂಬಿ ಹರಿಯುತ್ತಿರುವುದು ಸಂತಸದ ವಿಚಾರ. ಆದ್ರೆ, ಅತಿಯಾದ ಮಳೆಯಿಂದಾಗಿ ರೈತರಿಗೆ, ಜನರಿಗೆ ಕಷ್ಟವಾಗಿದೆ ಅಂತ ಹೇಳಿದ್ರು.
ಕಬಿನಿ ಹಾಗೂ ಕೆಆರ್ ಎಸ್‍ನಿಂದ ಅಧಿಕ ಪ್ರಮಾಣದಲ್ಲಿ ನೀರು ಹರಿಸುತ್ತಿರುವುದರಿಂದ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ವ್ಯಾಪ್ತಿಯ ನದಿ ಪಾತ್ರದ ಗ್ರಾಮಗಳಿಗೆ ಮುಳುಗಡೆಯ ಭೀತಿ ಎದುರಾಗಿದೆ. ಅಲ್ಲದೇ ಧಾರಾಕಾರ ಮಳೆಯಿಂದಾಗಿ ಅನೇಕ ಬೆಳೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಇತ್ತ ಕರಾವಳಿಯಲ್ಲಿ ಮಳೆರಾಯನ ಆರ್ಭಟ ಕಡಿಮೆಯಾಗಿದ್ದು, ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದ ನದಿ ನೀರಿನ ಪ್ರಮಾಣ ಕಡಿಮೆಯಾಗಿದೆ.
ಕೊಡಗು ಜಿಲ್ಲೆಯಾದ್ಯಂತ ಕಳೆದ ಎರಡು ತಿಂಗಳಿಂದ ನಿರಂತರ ಮಳೆಯಿಂದಾಗಿ ಕಾವೇರಿ ನದಿ ತುಂಬಿ ಹರಿಯುತ್ತಿದೆ. ತಲಕಾವೇರಿಯಲ್ಲಿ ಹುಟ್ಟಿ ದಕ್ಷಿಣ ಭಾರತದಲ್ಲಿ ಹರಿಯೋ ಕಾವೇರಿ ಯಾರಿಗೂ ತೊಂದರೆ ನೀಡದೇ, ಯಾವುದೇ ಅನಾಹುತಗಳನ್ನು ಮಾಡದೆ ಶಾಂತಸ್ವರೂಪಿಣಿಯಾಗಿ ಹರಿಯುತ್ತಿದ್ದಾಳೆ. ಇನ್ನು ಕಾವೇರಿ ಮಾತೆಗೆ ಮಡಿಕೇರಿ ತಾಲೂಕಿನ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಶ್ರದ್ದಾಭಕ್ತಿಯಿಂದ ಬಾಗಿನ ಅರ್ಪಿಸಲಾಯಿತು.
ಕಂಡು ಕೇಳರಿಯದ ಭಾರೀ ಮಳೆಗೆ ದೇವರನಾಡು ಕೇರಳ ತತ್ತರಿಸಿ ಹೋಗಿದೆ. ನಾಲ್ಕು ದಿನಗಳಿಂದ ಸುರಿಯುತ್ತಿರುವ ಮರಣ ಮಳೆಗೆ ಬಲಿಯಾದವರ ಸಂಖ್ಯೆ 30ಕ್ಕೆ ಏರಿಕೆಯಾಗಿದೆ. ಮಳೆಗೆ 54 ಸಾವಿರ ಮಂದಿ ನಿರಾಶ್ರಿತರಾಗಿದ್ದಾರೆ. ವಯನಾಡ್ ಜಿಲ್ಲೆಯಲ್ಲಿ ಆಗಸ್ಟ್ 14ರವರೆಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಇಡುಕ್ಕಿ, ಅಲಪುಜ್ಜಾ, ಕೊಟ್ಟಾಯಂ, ಪಾಲಕ್ಕಾಡ್, ಮಲಪ್ಪುರಂ ಮತ್ತು ಕೋಝೀಕೋಡ್‍ನಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದೆ. ಒಟ್ಟಿನಲ್ಲಿ ಮಳೆರಾಯನ ಆಗಮನದಿಂದ ಒಂದು ಕಡೆ ಸಂತಸ ಮೂಡಿದ್ರೆ, ಮತ್ತೊಂದು ಕಡೆ ಅವಾಂತರಗಳನ್ನು ಸೃಷ್ಟಿ ಮಾಡಿದ್ದಾನೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews