ಗಾಂಧಿನಗರ: ಗುಜರಾತ್‍ನ (Gujarat) ದ್ವಾರಕಾ ಬಳಿ ರಸ್ತೆ ವಿಭಜಕಕ್ಕೆ ಬಸ್ ಡಿಕ್ಕಿಯಾಗಿ ಬಳಿಕ ಮೂರು ವಾಹನಗಳಿಗೆ ಡಿಕ್ಕಿಯಾದ ಪರಿಣಾಮ ನಾಲ್ವರು ಮಕ್ಕಳು ಸೇರಿದಂತೆ 7 ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 14 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಹೆತಲ್‍ಬೆನ್ ಠಾಕೋರ್ (25), ತಾನ್ಯಾ (2), ರಿಯಾನ್ಸ್ (3), ವಿಷನ್ (7), ಪ್ರಿಯಾಂಶಿ (13), ಭಾವನಾಬೆನ್ ಠಾಕೋರ್ (35) ಮತ್ತು ಚಿರಾಗ್ ರಾಣಾಭಾಯ್ (25) ಎಂದು ಗುರುತಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ 51 ರಲ್ಲಿ ಶನಿವಾರ ರಾತ್ರಿ 7:45ರ ಸುಮಾರಿಗೆ ಬಸ್ ದ್ವಾರಕಾದಿಂದ ಅಹಮದಾಬಾದ್‍ಗೆ (Ahmedabad) ತೆರಳುತ್ತಿದ್ದಾಗ ಅಪಘಾತ (Accident) ಸಂಭವಿಸಿದೆ. ಅದರ ಚಾಲಕ ರಸ್ತೆಯಲ್ಲಿ ಜಾನುವಾರುಗಳಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಯತ್ನಿಸಿದಾಗ ಡಿವೈಡರ್‌ಗೆ ಡಿಕ್ಕಿಯಾಗಿದೆ. ಬಳಿಕ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ವ್ಯಾನ್, ಕಾರು ಮತ್ತು ಬೈಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತರಲ್ಲಿ ಆರು ಮಂದಿ ವ್ಯಾನ್‍ನಲ್ಲಿ ಪ್ರಯಾಣಿಸುತ್ತಿದ್ದವರು. ಮತ್ತೋರ್ವ ಬಸ್‍ನಲ್ಲಿದ್ದವರು ಎಂದು ತಿಳಿದು ಬಂದಿದೆ. ಆರು ಮಂದಿ ಗಾಂಧಿನಗರದ ಕಲೋಲ್‍ನವರು ಮತ್ತು ಒಬ್ಬರು ದ್ವಾರಕಾದವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.