ಗುವಾಹಟಿ: ಅಸ್ಸಾಂನಲ್ಲಿ (Assam) ನಿಷೇಧಿತ ಉಲ್ಫಾ (ಐ) (ULFA (I)) ಸಂಘಟನೆ ಉಗ್ರರು ಭಾನುವಾರ ಮುಂಜಾನೆ ಅಸ್ಸಾಂ-ಅರುಣಾಚಲ ಗಡಿಯ ಬಳಿಯ ಜಗುನ್‌ನಲ್ಲಿರುವ (Jagun) ಪೊಲೀಸ್ ಕಮಾಂಡೋ ಶಿಬಿರದ (Police Commando Camp) ಮೇಲೆ ಗುಂಡಿನ ದಾಳಿ ನಡೆಸಿದ ಪರಿಣಾಮ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ.
ಪೊಲೀಸ್ ಶಿಬಿರದ ಮೇಲೆ ಗ್ರೆನೇಡ್ ಮತ್ತು ಆರ್‌ಪಿಜಿ ಬಳಸಿ ದಾಳಿ ನಡೆದಿದೆ. ಉಗ್ರರ ದಾಳಿ ಬೆನ್ನಲ್ಲೇ ಅಸ್ಸಾಂ ಪೊಲೀಸರು ಕೂಡ ಪ್ರತಿದಾಳಿ ನಡೆಸಿದ್ದಾರೆ. ಭಾನುವಾರ ಮುಂಜಾನೆ 2 ಗಂಟೆಯ ಸುಮಾರಿಗೆ ಗುಂಡಿನ ದಾಳಿ ನಡೆದಿದೆ. ಸುಮಾರು 30 ನಿಮಿಷಗಳ ಕಾಲ ಗುಂಡಿನ ಕಾಳಗದಲ್ಲಿ ನಾಲ್ವರು ಅಸ್ಸಾಂ ಪೊಲೀಸರು ಗಾಯಗೊಂಡಿದ್ದಾರೆ. ಗುಂಡಿನ ದಾಳಿಯ ಬೆನ್ನಲ್ಲೇ ಉಲ್ಫಾ (ಐ) ಬಣದ ಉಗ್ರರು ಕಾಡಿನತ್ತ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಇಸ್ರೇಲ್ – ಇರಾನ್ ವಾರ್ ಎಫೆಕ್ಟ್; ವಿಮಾನಯಾನ ಸಂಸ್ಥೆಗಳಿಗೆ 5,000 ಕೋಟಿ ನಷ್ಟ
ಗಾಯಾಳು ಪೊಲೀಸರನ್ನು ಚಿತ್ರಂಜನ್ ಮಿಲಿ, ಜೋರ್ಹತ್‌ನ ದೇಬಾಶಿಶ್ ಬೋರಾ, ಚಾಬುವಾದ ರಬಿ ಘರ್ ಮತ್ತು ಗೋಲ್‌ಪಾರಾದ ಜಂಬೂಷ್ ಮರಕ್ ಎಂದು ಗುರುತಿಸಲಾಗಿದೆ. ಇವರನ್ನು ದಿಬ್ರುಗಢದ ಅಸ್ಸಾಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರನ್ನು ತಿನ್ಸುಕಿಯಾದ ಜಗುನ್‌ನಲ್ಲಿರುವ ಪೊಲೀಸ್ ಶಿಬಿರಕ್ಕೆ ನಿಯೋಜಿಸಲಾಗಿತ್ತು. ಇದನ್ನೂ ಓದಿ: ಬಿಜೆಪಿ ಜೊತೆಗೆ ಮೈತ್ರಿ ಇಲ್ಲ, ನಮ್ಮ ಸಿದ್ಧಾಂತ ಒಪ್ಪಿಕೊಳ್ಳುವವರೊಂದಿಗೆ ಮಾತ್ರವೇ ಹೊಂದಾಣಿಕೆ: ದಳಪತಿ ವಿಜಯ್
ಪೊಲೀಸ್ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆ ಆಡಳಿತ ಮಂಡಳಿ ತಿಳಿಸಿದೆ. ದಾಳಿಯ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಹಾಗೂ ಪೊಲೀಸರು ಉಗ್ರರಿಗಾಗಿ ಅಸ್ಸಾಂ-ಅರುಣಾಚಲ ಗಡಿ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ಈ ಮಧ್ಯೆ, ಜಗುನ್‌ನಲ್ಲಿರುವ ಅಸ್ಸಾಂ ಪೊಲೀಸ್ ಕಮಾಂಡೋ ಶಿಬಿರದ ಮೇಲೆ ನಡೆದ ದಾಳಿಯ ಹೊಣೆಯನ್ನು ಉಲ್ಫಾ(ಐ) ಸಂಘಟನೆ ಹೊತ್ತುಕೊಂಡಿದೆ. ಇದನ್ನೂ ಓದಿ: ದಾವಣಗೆರೆಯಲ್ಲಿ ʻಕೈʼಗೆ ಬಂಡಾಯದ ಬಿಸಿ – ಸಾಮೂಹಿಕ ನಾಮಪತ್ರ ಸಲ್ಲಿಕೆಗೆ ಮುಸ್ಲಿಂ ಮುಖಂಡರ ನಿರ್ಧಾರ

