ಧಾರವಾಡ: ತಾಲೂಕಿನ ಚಿಕ್ಕಮಲ್ಲಿಗವಾಡ ಗ್ರಾಮದ ಬಸಪ್ಪ ಅವರಿಗೆ ಸೇರಿದ ಹೋರಿಯೊಂದು 4.55 ಲಕ್ಷ ರೂ.ಗೆ ಬಿಕರಿಯಾಗಿ ಎಲ್ಲರ ಹುಬ್ಬೇರುವಂತೆ ಮಾಡಿದೆ.
ಬೆಳಗಾವಿ ಜಿಲ್ಲೆಯ ಬೆಳಗುಂದಿಯ ಕೃಷ್ಣಾ ಪಾಟೀಲ್ ಎಂಬವರು ಈ ಹೋರಿಯನ್ನು ಹುಡುಕಿಕೊಂಡು ಬಂದು, 4ಲಕ್ಷ 55 ಸಾವಿರ ರೂಪಾಯಿ ಕೊಟ್ಟು ಖರೀದಿ ಮಾಡಿದ್ದಾರೆ. ಹೋರಿಯ ಮಾಲೀಕ ಬಸಪ್ಪ ಅವರ ತಂದೆ ಭೀಮಪ್ಪ ಕಳೆದ ನಾಲ್ಕು ವರ್ಷಗಳ ಹಿಂದೆ ರಾಣೆಬೆನ್ನೂರ ತಾಲೂಕು ದೇವರಗುಡ್ಡದಲ್ಲಿ 30 ಸಾವಿರ ರೂಪಾಯಿಗೆ ಜೋಡಿ ಹೋರಿ ಖರೀದಿಸಿದ್ದರು. ಅ ಪೈಕಿ ಇದೊಂದು ಹೋರಿ ಬಲಷ್ಠವಾಗಿ ಬೆಳೆದಿದೆ.
Advertisement
Advertisement
ಎಲ್ಲಿಯೇ ಚಕ್ಕಡಿ ಷರತ್ತು ಇದ್ದರೆ ಅಲ್ಲಿ ಜೊತೆಗಿರುವ ಹೋರಿಯನ್ನೂ ಸಹ ಹುರಿದುಂಬಿಸಿಕೊಂಡು ಓಡಿ ಪ್ರಥಮ ಬಹುಮಾನ ಪಡೆಯುವ ಸಾಮರ್ಥ್ಯ ಈ ಹೋರಿಯಲ್ಲಿತ್ತು. ಹೀಗಾಗಿ ಇದಕ್ಕೆ ನಿತ್ಯ ಮೂರು ಹೊತ್ತು ಹುರುಳಿ ನುಚ್ಚು, 2 ಲೀಟರ್ ಹಾಲು, ಎರಡು ದಿನಕ್ಕೊಮ್ಮೆ ಮೊಟ್ಟೆ ಕೊಟ್ಟು ಈ ಹೋರಿಯನ್ನು ಷರತ್ತಿನ ಹೋರಿಯನ್ನಾಗಿ ಬೆಳೆಸಿದ್ದರು. ಹೀಗಾಗಿ ಈ ಹೋರಿಗೆ ಬಂಗಾರದ ಬೆಲೆ ಒದಗಿ ಬಂದಿದೆ.
Advertisement
ಎಲ್ಲೇ ಹೋದರೂ ಪ್ರಥಮ ಬಹುಮಾನ ಖಚಿತ ಎನ್ನುವಂತಿದ್ದ ಈ ಹೋರಿ ಕೇವಲ ಎರಡೇ ತಿಂಗಳಲ್ಲಿ ನಡೆದ 8 ಚಕ್ಕಡಿ ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನ ಪಡೆದಿದ್ದರೆ, 4 ಸ್ಪರ್ಧೆಗಳಲ್ಲಿ ದ್ವಿತೀಯ ಬಹುಮಾನ ಪಡೆದು ತನ್ನ ಸಾಮರ್ಥ್ಯ ಹೊರಹಾಕಿತ್ತು. ಇಲ್ಲಿಯವರೆಗೆ ಒಟ್ಟು 2 ಎರಡು ಬೈಕ್, ಒಂದೂವರೆ ಲಕ್ಷ ರೂಪಾಯಿಗೂ ಹೆಚ್ಚು ಬಹುಮಾನದ ಹಣವನ್ನು ಈ ಹೋರಿ ಬಸಪ್ಪನವರಿಗೆ ತಂದು ಕೊಟ್ಟಿತ್ತು.
Advertisement
ನಿತ್ಯವೂ ಬೈಕ್ ಜೊತೆಗೆ ರೇಸಿಂಗ್ ಮಾಡಿಸಿ ಓಡಿಸುವ ತಾಲೀಮು ಹಾಗೂ ಕೆರೆಯಲ್ಲಿ ಈಜಲು ಬಿಡುವ ಮೂಲಕ ಇದನ್ನು ಪಳಗಿಸಲಾಗುತಿತ್ತು. ಹಲವು ಕಡೆಗಳಲ್ಲಿ ಚಕ್ಕಡಿ ಸ್ಪರ್ಧೆಯಲ್ಲಿ ಬಹುಮಾನಗಳಿಸಿರುವ ಕಾರಣಕ್ಕೆ ಈ ಹೋರಿ ಇಷ್ಟೊಂದು ಬೇಡಿಕೆ ಪಡೆದುಕೊಂಡಿದೆ. ಇದನ್ನು ಖರೀದಿಸಿರುವ ಕೃಷ್ಣಾ ಪಾಟೀಲ್ ಅವರ ಬಳಿ ಒಂದು ಹೋರಿ ಇದ್ದು ಆ ಹೋರಿಗೆ ಜೋಡಿಗಾಗಿ ಈ ಹೋರಿಯನ್ನು ಖರೀದಿಸಿದ್ದಾರೆ. ಇನ್ನು ಮಹಾರಾಷ್ಟ್ರದಲ್ಲಿ ಮಾತ್ರವೇ ಹೀಗೆ ಚಕ್ಕಡಿ ಸ್ಪರ್ಧೆಗಳಲ್ಲಿ ಪ್ರಥಮ ಬರುವ ಹೋರಿಗಳನ್ನು ಸವಾಲ್ ಮಾಡಿ ಪ್ರತಿಷ್ಠೆಗೆ ಬಿದ್ದು ಲಕ್ಷಾಂತರ ರೂಪಾಯಿ ಕೊಟ್ಟು ಖರೀದಿಸುತ್ತಾರೆ.