ಕೋಲ್ಕತ್ತಾ: ಭಾರತದ ಕೆಲ ವಸ್ತುಗಳ ಮೇಲೆ ವಿಧಿಸಿದ ಸುಂಕವನ್ನು ನವೆಂಬರ್ 30ರ ನಂತರ ಅಮೆರಿಕ (USA) ಹಿಂದಕ್ಕೆ ಪಡೆಯಬಹುದು ಎಂದು ಮುಖ್ಯ ಆರ್ಥಿಕ ಸಲಹೆಗಾರ (CEA) ವಿ ಅನಂತ ನಾಗೇಶ್ವರನ್ (V Anantha Nageswaran) ಆಶಾವಾದ ವ್ಯಕ್ತಪಡಿಸಿದ್ದಾರೆ.
ಕೋಲ್ಕತ್ತಾದಲ್ಲಿ ವ್ಯಾಪಾರಿಗಳ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರಂಭದಲ್ಲಿ ಶೇ.25 ಸುಂಕ ನಂತರ ದಂಡದ ರೂಪದಲ್ಲಿ ಶೇ.25 ಸುಂಕ ವಿಧಿಸಬಹುದು ಎಂದು ನಾವು ನಿರೀಕ್ಷಿಸಿರಲಿಲ್ಲ. ಭೌಗೋಳಿಕ ರಾಜಕೀಯ ಸಂದರ್ಭಗಳು ಎರಡನೇ ಶೇ.25 ಸುಂಕ ವಿಧಿಸಲು ಕಾರಣವಾಗಿರಬಹುದು. ಆದರೆ ಕಳೆದ ಎರಡು ವಾರ ಮತ್ತು ಇತ್ತೀಚಿನ ಬೆಳವಣಿಗೆಗಳನ್ನು ಪರಿಗಣಿಸಿ ನ.30ರ ನಂತರ ಈ ದಂಡದ ಸುಂಕ ಇರಲಾರದು ಎಂದು ಭಾವಿಸಿದ್ದೇನೆ ಎಂದು ಹೇಳಿದರು.
ಸ್ಥಗಿತಗೊಂಡಿದ್ದ ಭಾರತ (India) ಮತ್ತು ಅಮೆರಿಕ ಮಧ್ಯೆ ವ್ಯಾಪಾರ ಮಾತುಕತೆ (Trade Talk) ಮತ್ತೆ ಆರಂಭವಾಗಿದೆ. ಅಷ್ಟೇ ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಹುಟ್ಟುಹಬ್ಬದ ಸಮಯದಲ್ಲಿ ಡೊನಾಲ್ಡ್ ಟ್ರಂಪ್ ದೂರವಾಣಿ ಕರೆ ಮಾಡಿ ಶುಭ ಕೋರಿದ್ದರು. ಈ ಎಲ್ಲಾ ಬೆಳವಣಿಗೆ ಮಧ್ಯೆ ಅನಂತ ನಾಗೇಶ್ವರನ್ ಅವರಿಂದ ಈ ಹೇಳಿಕೆ ಬಂದಿರುವುದು ವಿಶೇಷ.
ಮುಂದಿನ ಎರಡು ತಿಂಗಳುಗಳಲ್ಲಿ ದಂಡ ಸುಂಕ ಮತ್ತು ಪರಸ್ಪರ ಸುಂಕಗಳ ಮೇಲಿನ ನಿರ್ಧಾರ ಅಂತಿಮವಾಗಬಹುದು ಎಂದು ನಾನು ನಂಬುತ್ತೇನೆ. ಭಾರತದ ರಫ್ತು ಬೆಳವಣಿಗೆ ಪ್ರಸ್ತುತ ವಾರ್ಷಿಕವಾಗಿ 850 ಶತಕೋಟಿ ಡಾಲರ್ ಆಗಿದ್ದು, ಇದು 1 ಟ್ರಿಲಿಯನ್ ಡಾಲರ್ ತಲುಪುವ ಹಾದಿಯಲ್ಲಿದೆ. ಇದು ಜಿಡಿಪಿಯ ಶೇ.25 ರಷ್ಟನ್ನು ಪ್ರತಿನಿಧಿಸುತ್ತದೆ. ಇದು ಆರೋಗ್ಯಕರ, ಮುಕ್ತ ಆರ್ಥಿಕತೆಯನ್ನು ಸೂಚಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಸೆಡಾನ್‌ಗಳು, SUVಗಳು, ಕ್ರಾಸ್‌ಒವರ್‌ಗಳು, ಮಿನಿವ್ಯಾನ್‌ಗಳು, ಕಾರ್ಗೋ ವ್ಯಾನ್‌ಗಳು ಮತ್ತು ಲಘು ಟ್ರಕ್‌ಗಳಂತಹ ಪ್ರಯಾಣಿಕ ವಾಹನಗಳು, ಅವುಗಳ ಬಿಡಿಭಾಗಗಳ ಜೊತೆಗೆ ವಿನಾಯಿತಿ ನೀಡಲಾಗಿದೆ. ಇದರ ಜೊತೆಗೆ, ಅರೆ-ಸಿದ್ಧಪಡಿಸಿದ ತಾಮ್ರ ಉತ್ಪನ್ನಗಳು ಮತ್ತು ಕೆಲವು ತೀವ್ರವಾದ ತಾಮ್ರ ಉತ್ಪನ್ನಗಳನ್ನು ಹೆಚ್ಚಿನ ಸುಂಕಗಳಿಂದ ಹೊರಗಿಡಲಾಗಿದೆ. ಕಬ್ಬಿಣ, ಉಕ್ಕು, ಅಲ್ಯೂಮಿನಿಯಂ, ವಾಹನಗಳು, ಭಾಗಗಳು ಮತ್ತು ತಾಮ್ರ ಉತ್ಪನ್ನಗಳಂತಹ ಪ್ರಮುಖ ವರ್ಗಗಳನ್ನು ಸುಂಕ ವ್ಯಾಪ್ತಿಯಿಂದ ಹೊರಗಿಡಲಾಗಿದೆ.