ಬೆಂಗಳೂರು: ಸಿಲಿಕಾನ್ ಸಿಟಿಯ ಹೆಸರಘಟ್ಟ ರಸ್ತೆಯಲ್ಲಿರುವ ಸಪ್ತಗಿರಿ ತಾಂತ್ರಿಕ ಮಹಾವಿದ್ಯಾಲಯ 74ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ “ತ್ರಿವರ್ಣೋತ್ಸವ” ವನ್ನು ಹಮ್ಮಿಕೊಂಡಿತ್ತು.
ಸುಮಾರು 4,000 ಕೆ.ಜಿ. ಉಪ್ಪು, 250 ಕೆ.ಜಿ. ಬಣ್ಣ ಹಾಗೂ 400 ಕೆ.ಜಿ ಹೂಗಳನ್ನು ಬಳಸಿ ಮನೋಹರವಾದ ತ್ರಿವರ್ಣ ಧ್ವಜವನ್ನು ನಿರ್ಮಿಸಿದ್ದರು. ವಿಶೇಷ ಕಾರ್ಯಕ್ರಮವೊಂದನ್ನು ಆಯೋಜಿಸಿ ಕೊರೊನಾ ಸಂಕಷ್ಟಕ್ಕೆ ಸ್ಪಂದಿಸುತ್ತಿರುವ, ವೈದ್ಯರಾದ ಡಾ.ಉದಯಶಂಕರ್, ಡಾ.ಕಾರ್ತಿಕ್, ಡಾ.ಅನೂಷ, ಸ್ಟಾಫ್ ನರ್ಸ್ ನಾಗರಾಜ್, ಪೊಲೀಸರಾದ ಅರುಣ್ ಕುಮಾರ್ ಮತ್ತು ಲಕ್ಷಣ್ ಆಶಾ ಕಾರ್ಯಕರ್ತೆ ಮಂಜುಳಾ, ಬಿ.ಬಿ.ಎಂ.ಪಿ ನೌಕರರಾದ ರಮೇಶ್, ಅಂಬುಲೆನ್ಸ್ ಚಾಲಕರಾದ ಲೋಕೇಶ, ಶಿಕ್ಷಕರಾದ ಡಾ. ಎಂ ಧನಲಕ್ಷ್ಮೀ, ಪೌರಕಾರ್ಮಿಕರಾದ ಮಲ್ಲಪ್ಪ ಹಾಗೂ ಮಾಧ್ಯಮ ಮಿತ್ರರನ್ನು ಸನ್ಮಾನಿಸಲಾಯಿತು.
ಸಾಮಾಜಿಕ ಅಂತರ ಹಾಗೂ ಕೊರೊನಾ ಸೋಂಕು ಹರಡದಂತೆ ಮುಂಜಾಗೃತಾ ಕ್ರಮ ಕೈಗೊಂಡು ಈ ಅದ್ಧೂರಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಿಶಿಷ್ಟ ಹಾಗೂ ವಿಶೇಷ ಕಾರ್ಯಕ್ರಮದಲ್ಲಿ ಸಿಬ್ಬಂದಿ ಹಾಗೂ ಕೆಲವು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪ್ರತಿ ವರ್ಷದಂತೆ ಈ ವರ್ಷವೂ ವಿನೂತನ ಧ್ವಜವನ್ನು ನಿರ್ಮಿಸಿ ರಾಷ್ಟ್ರಪ್ರೇಮ ಮೆರೆದಿದ್ದಾರೆ. ಜೊತೆಗೆ ಮಾನವೀಯತೆಯ ಪ್ರತೀಕವಾಗಿ ಕೊರೊನಾ ವಾರಿಯರ್ಸ್‍ಗೆ ಸನ್ಮಾನಿಸಿದ್ದಾರೆ.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥ ಜಿ. ದಯಾನಂದರವರು, ಕಾರ್ಯಕಾರಿ ನಿರ್ದೇಶಕ ಜಿ.ಡಿ ಮನೋಜ್, ಪ್ರಾಂಶುಪಾಲ ಡಾ.ಹೆಚ್ ರಾಮಕೃಷ್ಣ ಹಾಗೂ ಉಪಪ್ರಾಂಶುಪಾಲ ಡಾ.ಎಂ.ಹೆಚ್ ಅಣ್ಣಯ್ಯ ಉಪಸ್ಥಿತರಿದ್ದರು.