4 ವಾರದ ಹಿಂದೆ ಇಂಗ್ಲೆಂಡ್‌ನಿಂದ ಬಂದ ಪ್ರಯಾಣಿಕರಿಗೆ ಕೊರೊನಾ ಟೆಸ್ಟ್‌ ಕಡ್ಡಾಯ – ಮಾರ್ಗಸೂಚಿಯಲ್ಲಿ ಏನಿದೆ?

Public TV
2 Min Read
kempegowda airport bengaluru

ನವದೆಹಲಿ: ಇಂಗ್ಲೆಂಡ್‌ನಲ್ಲಿ ಹೊಸ ರೀತಿ ಕೊರೊನಾ ವೈರಸ್‌ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಂಗ್ಲೆಂಡ್‌ನಿಂದ ಆಗಮಿಸಿದ ಪ್ರಯಾಣಿಕರನ್ನು ಗುರಿಯಾಗಿಟ್ಟುಕೊಂಡು ಕೇಂದ್ರ ಆರೋಗ್ಯ ಸಚಿವಾಲಯ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ನವೆಂಬರ್‌ 25 ರಿಂದ ಡಿಸೆಂಬರ್‌ 23ರವರೆಗೆ ಇಂಗ್ಲೆಂಡ್‌ನಿಂದ ಅಥವಾ ಇಂಗ್ಲೆಂಡ್‌ ಮೂಲಕ ದೇಶಕ್ಕೆ ಆಗಮಿಸಿದ ಎಲ್ಲ ಅಂತಾರಾಷ್ಟ್ರೀಯ ಪ್ರಯಾಣಿಕರು ಕಡ್ಡಾಯವಾಗಿ ಆರ್‌ಟಿ-ಪಿಸಿಆರ್‌ ಪರೀಕ್ಷೆ ಮಾಡಬೇಕೆಂದು ಸೂಚಿಸಿದೆ.

ಮಾರ್ಗಸೂಚಿಯಲ್ಲಿ ಏನಿದೆ?
ಪರೀಕ್ಷೆಯಲ್ಲಿ ಪಾಸಿಟಿವ್‌ ಬಂದ ವ್ಯಕ್ತಿಗಳು ಐಸಿಎಂಆರ್‌ ಮಾನಂದಡದ ರಾಜ್ಯ ಸರ್ಕಾರ ಸೂಚಿಸಿದ ಕೇಂದ್ರಗಳಲ್ಲಿ ಐಸೋಲೇಷನ್‌ ಆಗಬೇಕು ಮತ್ತು ಮಾದರಿಯನ್ನು ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ವೈರಾಲಜಿ ಪುಣೆ ಅಥವಾ ಇತರ ಲ್ಯಾಬ್‌ಗಳಿಗೆ ಕಳುಹಿಸಬೇಕು ಎಂದು ಹೇಳಿದೆ.

corona mumbai airport

ಆರ್‌ಟಿ ಪಿಸಿಆರ್‌ ಪರೀಕ್ಷೆಯಲ್ಲಿ ನೆಗೆಟಿವ್‌ ಬಂದರೆ ಅವರು ಮನೆಯಲ್ಲಿ 14 ದಿನಗಳ ಕಾಲ ಕ್ವಾರಂಟೈನ್‌ ಆಗಬೇಕು. ವಿಮಾನ ಸೇವಾ ಸಂಸ್ಥೆಗಳು ಪ್ರಯಾಣಿಕರಿಗೆ ಹೊಸ ಕೊರೊನಾ ನಿಯಮಗಳನ್ನು ಕಡ್ಡಾಯವಾಗಿ ತಿಳಿಸಬೇಕು. ವಿಮಾನದಿಂದ ಇಳಿದು ನಿಲ್ದಾಣಕ್ಕೆ ಬರುವ ಜಾಗದಲ್ಲಿ ಹೊಸ ಮಾಹಿತಿಗಳನ್ನು ಪ್ರದರ್ಶಿಸಬೇಕು.

ಎಲ್ಲ ರಾಜ್ಯ ಸರ್ಕಾರಗಳು ವಲಸೆ ವಿಭಾಗದಿಂದ ಇಂಗ್ಲೆಂಡ್‌ನಿಂದ ಬಂದ ಪ್ರಯಾಣಿಕರ ಮಾಹಿತಿಯನ್ನು ಪಡೆದು ಅವರ ಮೇಲೆ ನಿಗಾ ಇಡಬೇಕು.

ಒಂದು ವೇಳೆ ಪಾಸಿಟಿವ್‌ ಬಂದರೆ ಆ ಪ್ರಯಾಣಿಕ ಕುಳಿತುಕೊಂಡ ಸೀಟಿನ ಹಿಂದೆ ಮತ್ತು ಮುಂದಿನ ಮೂರು ಸಾಲಿನ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಅವರನ್ನು ಪ್ರತ್ಯೇಕವಾಗಿ ಇರಿಸಬೇಕು.

ನವೆಂಬರ್‌ 25 ರಿಂದ ಡಿಸೆಂಬರ್‌ 8ವರೆಗೆ ಇಂಗ್ಲೆಂಡ್‌ನಿಂದ ಬಂದವರನ್ನು ಜಿಲ್ಲಾ ಅಧಿಕಾರಿಗಳು ಸಂಪರ್ಕಿಸಿ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು.

kempegowda airport bengaluru 2

ಡಿಸೆಂಬರ್‌ 9 ರಿಂದ ಡಿಸೆಂಬರ್‌ 23ರ ಅವಧಿಯಲ್ಲಿ ಆಗಮಿಸಿದ ಪ್ರಯಾಣಿಕರನ್ನು ಜಿಲ್ಲಾಮಟ್ಟದ ಆರೋಗ್ಯ ಅಧಿಕಾರಿಗಳು ಭಾರತಕ್ಕೆ ಆಗಮಿಸಿದ ದಿನದಿಂದ 14 ದಿನಗಳ ಕಾಲ ಪ್ರತಿದಿನ ಕರೆ ಮಾಡಿ ಆರೋಗ್ಯವನ್ನು ವಿಚಾರಿಸಬೇಕು.

ಒಂದು ವೇಳೆ ಈ ಅವಧಿಯಲ್ಲಿ ಪ್ರಯಾಣಿಕರಿಗೆ ಜ್ವರ, ಶೀತ ಅಥವಾ ಕೊರೊನಾ ಲಕ್ಷಣಗಳು ಕಂಡು ಬಂದಲ್ಲಿ ಮಾಸ್ಕ್‌ ಧರಿಸಿ ಮನೆಯಲ್ಲೇ ಪ್ರತ್ಯೇಕವಾಗಿರಬೇಕು ಮತ್ತು ಕೂಡಲೇ ಜಿಲ್ಲಾ ಆರೋಗ್ಯ ಅಧಿಕಾರಿಗೆ ಮಾಹಿತಿ ನೀಡಬೇಕು. ಅಥವಾ ರಾಷ್ಟ್ರೀಯ ಅಥವಾ ರಾಜ್ಯದ ಕೊರೊನಾ ಸಹಾಯವಾಣಿಗೆ ಕರೆ ಮಾಡಿ ತಿಳಿಸುವುದು.

ಪಾಸಿಟಿವ್‌ ಬಂದ ವ್ಯಕ್ತಿಯ ಸಂಪರ್ಕಕ್ಕೆ ಬಂದ ಎಲ್ಲ ವ್ಯಕ್ತಿಗಳನ್ನು ರಾಜ್ಯ ಸರ್ಕಾರ ಸೂಚಿಸಿದ ಜಾಗದಲ್ಲಿ ಸಾಂಸ್ಥಿಕ ಕ್ವಾರಂಟೈನ್‌ ಮಾಡಬೇಕು ಮತ್ತು 5-10 ದಿನದ ಒಳಗಡೆ ಅವರನ್ನು  ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒಳಪಡಿಸಬೇಕು.

Share This Article
Leave a Comment

Leave a Reply

Your email address will not be published. Required fields are marked *