ಬೆಂಗಳೂರು: ಚೀನಿ ವೈರಸ್ ಕೊರೊನಾ ರಾಜ್ಯದಲ್ಲಿ ಅಟ್ಟಹಾಸ ಮೆರೆಯುತ್ತಿದ್ದು, ಬರೋಬ್ಬರಿ ನಾಲ್ಕು ವರ್ಷದ ಬಳಿಕ ತಾಯ್ತನದ ಸಂಭ್ರಮವನ್ನೇ ಕಸಿದುಕೊಂಡಿದೆ.
ಹೌದು. ಒಂದೆಡೆ ಕಂದನ ಜನುಮ ಇನ್ನೊಂದೆಡೆ ಅಮ್ಮನ ಮರಣ. ನಾಲ್ಕು ವರ್ಷದ ಬಳಿಕ ತಾಯ್ತನದ ಸಂಭ್ರಮವನ್ನೇ ಈ ಮಹಾಮಾರಿ ಕೊರೊನಾ ಚಿವುಟಿದೆ.
ಬೆಂಗಳೂರು ಪೂರ್ವ ವಿಭಾಗದ ಮಹಿಳೆ ಮಗುವಿಗೆ ಜನ್ಮ ಕೊಟ್ಟು ಮೂರು ದಿನದ ಬಳಿಕ ಕೊರೊನಾಗೆ ಬಲಿಯಾಗಿದ್ದಾರೆ. ಮದ್ವೆಯಾಗಿ ನಾಲ್ಕು ವರ್ಷದ ಬಳಿಕ ದಂಪತಿ ತಾಯ್ತನದ ಖುಷಿಯಲ್ಲಿದ್ದರು. ಆದರೆ ತುಂಬು ಗರ್ಭಿಣಿಯ ಶ್ವಾಸಕೋಶಕ್ಕೆ ಸೋಂಕು ಹರಡಿತ್ತು.
ಮೈಸೂರು ರಸ್ತೆಯ ಹೆರಿಗೆ ಆಸ್ಪತ್ರೆಯ ವೈದ್ಯರು ಮಹಿಳೆಯನ್ನು ಉಳಿಸಿಕೊಳ್ಳಲು ಶತಪ್ರಯತ್ನ ಮಾಡಿದ್ದಾರೆ. ಮಗುವನ್ನು ಅಪರೇಷನ್ ಮಾಡಿ ತೆಗೆದಿದ್ದಾರೆ. ಆದರೆ ತಾಯಿಗೆ ಸೋಂಕು ತೀವ್ರವಾಗಿತ್ತು. ಮಗುವಿನ ಮುಖವನ್ನು ಕೂಡ ತಾಯಿ ನೋಡಿರಲಿಲ್ಲ. ಯಾಕೆಂದರೆ ಮಗುವನ್ನು ಕೊರೊನಾ ಸೋಂಕಿತ ತಾಯಿಯ ಪಕ್ಕ ಇಡುವಂತಿಲ್ಲ.
ಹುಟ್ಟಿದ ಬಳಿಕ ಮಗುವನ್ನು ಕೆಂಗೇರಿಯಲ್ಲಿದ್ದ ಎನ್‍ಐಸಿ ಯುಗೆ ರವಾನಿಸಿದ್ದಾರೆ. ಆದರೆ ತಾಯಿ ಚಿಕಿತ್ಸೆ ಫಲಕಾರಿಯಾಗದೇ ಮೂರು ದಿನದ ಬಳಿಕ ಸಾವನ್ನಪ್ಪಿದ್ದಾರೆ. ಹೀಗಾಗಿ ಹೆತ್ತ ಮಗುವಿನ ಮುಖವನ್ನು ತಾಯಿ ನೋಡದೆ ಇಹಲೋಕ ತ್ಯಜಿಸಿದ ಮನಕಲಕುವ ಘಟನೆ ನಡೆದಿದೆ.