ಮುಂಬೈ: ಲಕ್ಷುರಿ ಬಸ್ ಚಾಲಕನೊಬ್ಬ 4 ವರ್ಷದ ಬಾಲಕಿಯ ಮೇಲೆ ತನ್ನ ಕಾಮತೃಷೆ ತೀರಿಸಿಕೊಂಡ ವಿಲಕ್ಷಣ ಘಟನೆಯೊಂದು ನಡೆದಿದೆ.
ಕಾಮುಕ ಚಾಲಕ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಲ್ಲದೆ, ಆಕೆಯನ್ನು ಗೋಣಿಚೀಲದಲ್ಲಿ ಕಟ್ಟಿ ಮುಂಬೈ- ಅಹಮ್ಮದಾಬಾದ್ ಹೆದ್ದಾರಿಯಲ್ಲಿರುವ ಪೆಟ್ರೋಲ್ ಪಂಪ್ ಬಳಿ ಎಸೆದು ಹೋಗಿದ್ದಾನೆ. ಮರುದಿನ ಬೆಳಗ್ಗೆ ಪೆಜ್ಞೆ ಬಂದ ಬಳಿಕ ಗೋಣಿ ಚೀಲದೊಳಗೆ ಚಲನೆ ಕಾಣಿಸಿತ್ತು. ಹೀಗಾಗಿ ಸ್ಥಳೀಯರು ಗೋಣಿಚೀಲವನ್ನು ತೆರೆದು ನೋಡಿದಾಗ ಅದರೊಳಗೆ ಬಾಲಕಿ ಇರುವುದು ಬೆಳಕಿಗೆ ಬಂದಿದೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಬಾಲಕಿಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಪಾರ್ಕ್ ಮಾಡಿದ್ದ ಲಕ್ಷುರಿ ಬಸ್ಸಿನಲ್ಲಿ ಬಾಲಕಿ ತನ್ನ ಗೆಳೆಯರೊಂದಿಗೆ ಭಾನುವಾರ ಮಧ್ಯಾಹ್ನದ ಬಳಿಕ ಆಟವಾಡುತ್ತಿದ್ದಳು. ಈ ವೇಳೆ ಬಸ್ ಅಚಾನಕ್ ಆಗಿ ಚಲಿಸಿದ್ದು, ಬಾಲಕಿ ಬಿಟ್ಟು ಉಳಿದವರು ಬಸ್ಸಿನಿಂದ ಹಾರಿ ಪಾರಾಗಿದ್ದಾರೆ. ಇತ್ತ ಬಸ್ಸಿನೊಳಗೆ ಬಾಲಕಿ ಇರುವುದನ್ನು ಗಮನಿಸಿದ ಚಾಲಕ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಲ್ಲದೆ ಆಕೆಯ ಕತ್ತು ಹಿಸುಕಿದ್ದಾನೆ. ಬಾಲಕಿ ಮೃತಪಟ್ಟಿದ್ದಾಳೆ ಎಂದು ಅಂದುಕೊಂಡ ಕಾಮುಕ ಚಾಲಕ ಆಕೆಯನ್ನು ಗೋಣಿಚೀಲದೊಳಗೆ ತುಂಬಿ ನಂತರ ಪೆಟ್ರೋಲ್ ಬಂಕ್ ಬಳಿ ಬಿಸಾಕಿದ್ದಾನೆ.
ಇತ್ತ ಮಗಳು ನಾಪತ್ತೆಯಾಗಿದ್ದರಿಂದ ಬಾಲಕಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಹೀಗಾಗಿ ಬಾಲಕಿಯ ಪತ್ತೆಗೆ ಹುಡುಕಾಟದಲ್ಲಿದ್ದ ಪೊಲೀಸರು ಬೇರೆ ಬೇರೆ ಠಾಣೆಗಳಿಗೆ ಮಾಹಿತಿ ನೀಡಿದರು. ಅಲ್ಲದೆ ಹತ್ತಿರದ ಸಿಸಿಟಿವಿಗಳನ್ನು ಪರಿಶೀಲನೆ ಮಾಡಿದರು. ಈ ವೇಳೆ ಆರೋಪಿ ಚಾಲಕನನ್ನು ಪೊಲೀಸರು ಗುರುತಿಸಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಡಿಸೆಂಬರ್ 28ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.